ಬೆಳಗಾವಿ: ‘ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗಿ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಟಿಎಚ್‌ಒ ಕಾರ್ಯಾಲಯಗಳ ಸಹಯೋಗದಲ್ಲಿ ಇಲ್ಲಿನ ವಡಗಾವಿಯ ಮಾಧವಾಪುರದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಳೆಯಾದಾಗ ಡೆಂಗಿ, ಮಲೇರಿಯಾ, ಚಿಕೂನ್ ಗುನ್ಯದಂತಹ ರೋಗಗಳು ಹರಡುವ ಭೀತಿ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು. ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ರೋಗಗಳ ಹರಡುವಿಕೆ ತಡೆಯುವಲ್ಲಿ ಸಮುದಾಯದ ಪಾತ್ರ ದೊಡ್ಡದಿದೆ’ ಎಂದರು.
ಟಿಎಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ‘ಡೆಂಗಿ ಮಾರಣಾಂತಿಕ ಕಾಯಿಲೆಯಾಗಿದೆ. ತಲೆ ನೋವು, ತೀವ್ರ ಜ್ವರ, ಕಣ್ಣಿನ ಹಿಂಭಾಗ ನೋವು, ವಾಕರಿಕೆ, ಮಾಂಸ ಖಂಡಗಳಲ್ಲಿ ಸೆಳೆತ ಕಾಣಿಸಿಕೊಳ್ಳುವುದು ರೋಗದ ಲಕ್ಷಣವಾಗಿದೆ. ಇದನ್ನು ನಿರ್ಲಕ್ಷಿಸಬಾರದು. ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.
Laxmi News 24×7