ಉದಯಪುರ: ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ಎಂಬ ನಿಯಮವನ್ನು ಕಾಂಗ್ರೆಸ್ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದೇ ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ‘ಅಸಾಧಾರಣ ರೀತಿ’ಯಲ್ಲಿ ಕೆಲಸ ಮಾಡಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಇದೆ.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಈ ಪ್ರಸ್ತಾವವನ್ನು ಶುಕ್ರವಾರ ಮುಂದಿಡಲಾಗಿದೆ.
ಮುಖಂಡರು ಯಾವುದೇ ಹುದ್ದೆಗೆ ದೀರ್ಘ ಕಾಲ ಅಂಟಿಕೊಳ್ಳುವುದಕ್ಕೂ ತಡೆ ಒಡ್ಡುವ ಪ್ರಸ್ತಾವ ಇದೆ. ಗರಿಷ್ಠ ಐದು ವರ್ಷ ಒಂದು ಹುದ್ದೆಯಲ್ಲಿ ಇರಬಹುದು. ನಂತರ ಮೂರು ವರ್ಷ ಅವರು ಯಾವುದೇ ಹುದ್ದೆ ಹೊಂದುವಂತಿಲ್ಲ. ಕಾರ್ಯದಕ್ಷತೆಯ ಮೇಲೆ ನಿಗಾ ಇರಿಸುವುದಕ್ಕಾಗಿ ಮೌಲ್ಯಮಾಪನ ವಿಭಾಗ ಮತ್ತು ಕಾಲ ಕಾಲಕ್ಕೆ ಸಮೀಕ್ಷೆ ನಡೆಸುವುದು ಹಾಗೂ ಇತರ ಮಹತ್ವ ವಿಚಾರಗಳಿಗೆ ಗಮನ ಹರಿಸಲು ಸಾರ್ವಜನಿಕ ಒಳನೋಟ ಗುಂಪು ರಚನೆಯ ಸಲಹೆಯೂ ಶಿಬಿರದಲ್ಲಿ ಮಂಡನೆ ಆಗಿದೆ.
ಚಿಂತನ ಶಿಬಿರವು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಯುಗವೊಂದನ್ನು ಆರಂಭಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್ ಹೇಳಿದ್ದಾರೆ.
‘ಸಮಯ ಬದಲಾಗುತ್ತಿದೆ. ಆದರೆ, ಕಾಲದ ಜತೆಗೆ ಬದಲಾಗಲು ನಮಗೆ ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದ್ದಾರೆ.
‘ಒಂದು ಕುಟುಂಬ ಒಂದು ಟಿಕೆಟ್’ ಪ್ರಸ್ತಾವದ ವಿಚಾರದಲ್ಲಿ ಬಹುತೇಕ ಸಹಮತ ಏರ್ಪಟ್ಟಿದೆ. ಪಕ್ಷದ ಹಿರಿಯ ಮುಖಂಡರ ಮಕ್ಕಳು ಅಥವಾ ಸಂಬಂಧಿಕರು ನೇರವಾಗಿ ಬಂದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ. ಈ ನಿಯಮವು ಗಾಂಧಿ-ನೆಹರೂ ಕುಟುಂಬಕ್ಕೂ ಅನ್ವಯ ಆಗುತ್ತದೆ’ ಎಂದು ಮಾಕನ್ ತಿಳಿಸಿದ್ದಾರೆ.