ಕೊಪ್ಪಳ: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಅಧಿಕಾರದ ಚುಕ್ಕಾಣಿ ಹಿಡಿಯಲು 3 ಪ್ರಮುಖ ಪಕ್ಷಗಳು ಮತದಾರರ ಮನವೊಲಿಕೆಗೆ ಮನೆಬಾಗಿಲಿಗೆ ಎಡತಾಕುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ರಣತಂತ್ರ ರೂಪಿಸುತ್ತಿವೆ.
ಈ ಬಾರಿ ನಾವು ಮುಖ್ಯಮಂತ್ರಿಬಸವರಾಜ್ ಬೊಮ್ಮಾಯಿನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆಂದು ಹೇಳಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ನೂರಕ್ಕೆ ನೂರರಷ್ಟು ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆಂದು ಕಾಂಗ್ರೆಸ್ ಸಹ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಜನತಾ ಜಲಧಾರೆ ಮೂಲಕ ಮಿಷನ್ 123 ಯುದ್ಧ ಆರಂಭವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ನಡುವೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಜೋಡಿಯೊಂದು ಎಚ್‍ಡಿಕೆಗೆ ಮತ ಹಾಕುವಂತೆ ಮನವಿ ಮಾಡಿರುವುದು ಗಮನ ಸೆಳೆಯುತ್ತಿದೆ.
ಮದುವೆಯಲ್ಲಿ ಕುಮಾರಣ್ಣನ ಜಪ
ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿಯೊಂದು ತಮ್ಮ ಮದುವೆ ಸಮಾರಂಭದಲ್ಲಿಯೇ ಎಚ್.ಡಿ.ಕುಮಾರಸ್ವಾಮಿಯವರ ಜಪ ಮಾಡಿದೆ. ವೇದಿಕೆಯಲ್ಲಿ ಕುಮಾರಣ್ಣನನ್ನು ಬೆಂಬಲಿಸಿ ಎಂದು ವಧು-ವರ ಬಿತ್ತಿ ಪತ್ರ ಪ್ರದರ್ಶನ ಮಾಡಿದೆ.