ಬೆಂಗಳೂರು: ಕಾಂಗ್ರೆಸ್ನಲ್ಲಿ ಆಂತರಿಕವಾಗಿ ತಲೆದೋರಿರುವ ಗೊಂದಲ, ಕಿತ್ತಾಟ ಇದೀಗ ಮತ್ತೆ ಬಹಿರಂಗಗೊಂಡಿದೆ. ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಕ್ಸಮರ ಶುರುವಾಗಿದ್ದು, ರಮ್ಯಾ ಡಿಕೆಶಿ ವಿರುದ್ಧ ರೊಚ್ಚಿಗೆದ್ದು ಬೆಳಗ್ಗೆಯಿಂದ ಒಂದೇ ಸಮನೆ ಟ್ವಿಟರ್ ಸಮರ ಶುರು ಮಾಡಿದ್ದಾರೆ.
‘ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ’ ಎಂಬ ಗಂಭೀರ ಆರೋಪವನ್ನು ಡಿಕೆ ಶಿವಕುಮಾರ್ ಮಾಡಿದ್ದರು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಇದೀಗ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.
ಇದಾಗಲೇ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲಿಯೇ ಭಾರಿ ಅಸಮಾಧಾನ ಶುರುವಾಗಿತ್ತು. ಇದೀಗ ರಮ್ಯಾ ಅವರ ಟ್ವೀಟ್ನಿಂದಾಗಿ ಕಾಂಗ್ರೆಸ್ನಲ್ಲಿ ಹೊತ್ತಿರುವ ಕಿಡಿಗೆ ಮತ್ತಷ್ಟು ತುಪ್ಪ ಸುರಿಸಿದಂತಾಗಿದೆ.
ಕಾಂಗ್ರೆಸ್ನಿಂದ ನಾನು ಎಂಟು ಕೋಟಿ ರೂಪಾಯಿ ಪಡೆದಿದ್ದೇನೆ ಎಂದು ಸುಳ್ಳುಸುದ್ದಿ ಹರಿಬಿಡಲಾಗಿದೆ. ನಾನು ಓಡಿ ಹೋಗಿದ್ದೇನೆ ಅಂತಲೂ ಸುದ್ದಿ ವೈರಲ್ ಮಾಡಿದ್ದರು. ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ನಾನು ಏಲ್ಲಿಯೂ ಓಡಿ ಹೋಗಿಲ್ಲ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದೆ. ನಾನು ಮೌನವಾಗಿದ್ದೇ ತಪ್ಪಾಯ್ತು ಎಂದು ಟ್ವೀಟ್ನಲ್ಲಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ.
ಟ್ವೀಟ್ ಸಮರ ಮುಂದುವರೆಸಿದ ಅವರು, ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ. ನನಗೆ ಅವಕಾಶ ನೀಡಲಾಗಿದೆ ಅಂತ ಯಾರದ್ರೂ ಹೇಳಿದ್ರೆ ಅವರು ಅವಕಾಶವಾದಿಗಳು ಎಂದಿದ್ದಾರೆ. ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ‘ಕಚೇರಿ’ ಈ ಸಂದೇಶಗಳನ್ನು ರವಾನಿಸಿದೆ. ಆದರೆ, ಅವರು ತೊಂದರೆ ತೆಗೆದುಕೊಳ್ಳುವುದು ಬೇಡ, ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತರ ಜತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ರಮ್ಯಾ ಟ್ವೀಟ್ ವಿಚಾರ ಯಾವುದು ಗೊತ್ತಿಲ್ಲ. ಎಂ.ಬಿ ಪಾಟೀಲ್, ರಮ್ಯಾ ಇಬ್ಬರೂ ನಮ್ಮ ಪಕ್ಷದವರು. ಟ್ವೀಟ್ ವಿಚಾರದಲ್ಲಿ ಎಲ್ಲೋ ಗೊಂದಲವಾಗಿದೆ.