ನವದೆಹಲಿ: ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದನ್ನು ಅಥವಾ ‘ಲೌಡ್ ಸ್ಪೀಕರ್’ನಲ್ಲಿ ಸಂಗೀತ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ.
ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶ|ದಿಂದ ಭಾರತೀಯ ರೈಲ್ವೆ ಹೊಸದಾಗಿ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅದರ ಪ್ರಕಾರ, ಪ್ರಯಾಣಿಕರು ದೂರು ನೀಡಿದರೆ, ಆ ಸಮಸ್ಯೆ ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯದ್ದಾಗಿರುತ್ತದೆ.
ರೈಲಿನಲ್ಲಿರುವ ರೈಲ್ವೆ ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬ್ಬಂದಿ ಈ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ರೈಲ್ವೆ ತಿಳಿಸಿದೆ.
ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಷರತ್ತುಗಳ ನಡುವೆಯೂ 60 ವರ್ಷ ಮೇಲಿನ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಅಗತ್ಯ ನೆರವು ನೀಡುತ್ತಾರೆ.