ಬೆಂಗಳೂರು, ಮೈಸೂರು, ಗದಗ ಸೇರಿದಂತೆ ಹಲವು ನಗರಗಳ ದೇಗುಲಗಳಲ್ಲಿ ಮೈಕ್ ಮೂಲಕ ಸುಪ್ರಭಾತ ಹಾಕಲಾಯಿತು. ಕೆಲವೆಡೆ ಭಕ್ತರು ಭಜನೆ ಮಾಡಿದರು. ಆದರೆ ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ, ಕೋಲಾರ ವಿಜಯಪುರ ಸೇರಿದಂತೆ ಹಲವು ನಗರಗಳಲ್ಲಿ ದೇಗುಲಗಳ ಕಡೆಗೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಬರಲಿಲ್ಲ. ಹೀಗಾಗಿ ಅಭಿಯಾನವೂ ಸದ್ದು ಮಾಡಲಿಲ್ಲ. ವಿವಾದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರ್ಮಿಕ ಸ್ಥಳಗಳ ಮೈಕ್ಗಳಿಂದ ಹೊಮ್ಮುವ ಧ್ವನಿಯು ಎಷ್ಟು ಡೆಸಿಬಲ್ ಇರಬೇಕು ಎನ್ನುವ ಬಗ್ಗೆ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್, ರಾಜ್ಯದ ಶಾಂತಿ ಕದಡುವ ಸಂಘಟನೆಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ: ಸಿಎಂ
ಕರ್ನಾಟಕದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ದೃಷ್ಟಿಯಿಂದ ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ ಹೊರಡಿಸಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಾರ್ವಜನಿಕ ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿ ಇದೆ. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ಆಜ್ಞೆ ಮಾಡಿದೆ.