ಬೆಂಗಳೂರು: ಈಗಾಗಲೇ ಜೆಡಿಎಸ್ ನಿಂದ ಹಲವರು ಹೊರ ಹೋಗಿದ್ದಾರೆ. ವಿಧಾನಸಭಾ ಚುನಾವಣೆಗೆ ( Karnataka Assembly Election ) ಒಂದು ವರ್ಷ ಬಾಕಿ ಇರುವಾಗಲೇ, ಪಕ್ಷದಿಂದ ಹೊರ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿಯೇ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( HD Devegowdha ) ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( HD Kumaraswamy ) ವಿರುದ್ಧ ನೇರಾನೇರಾ ವಾಗ್ದಾಳಿ ನಡೆಸಿದ್ದಾರೆ.
ಹೀಗಾಗಿ ಇದೀಗ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗೋ ಎಲ್ಲಾ ಮುನ್ಸೂಚನೆ ಹೊರ ಬಿದ್ದಿದೆ.
ಹೌದು.. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ( MLC Marithibbegowda ) ಅವರೇ, ಹೀಗೆ ಸ್ವ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿರೋರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಪಕ್ಷದಲ್ಲಿ ದುಡ್ಡಿರುವವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಇಂದು ಪಕ್ಷ ಅಧೋಗತಿಗೆ ಹೋಗುತ್ತಿದೆ. ಇದಕ್ಕೆಲ್ಲಾ ಕಾರ್ಯಕರ್ತರಲ್ಲ, ಪಕ್ಷದ ನಾಯಕರ ನಡೆಯೇ ನೇರ ಕಾರಣವಾಗಿದೆ. ನಾನು ಯಾವುದೇ ಕಾರಣಕ್ಕೂ ನಾಯಕರನ್ನ ಭೇಟಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.