ನಿಜ ಹೇಳಬೇಕೆಂದರೆ, ಹೊಸಬನ ತರಹ ಫೀಲ್ ಆಗುತ್ತಿದೆ …’ ಶರಣ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡೂವರೆ ವರ್ಷಗಳಾಗಿವೆ. 2019ರ ಅಕ್ಟೋಬರ್ನಲ್ಲಿ ಅವರ ‘ಅಧ್ಯಕ್ಷ ಇನ್ ಅಮೆರಿಕಾ’ ಬಿಡುಗಡೆಯಾಗಿತ್ತು. ಇಂದು ‘ಅವತಾರ ಪುರುಷ 1′ ಬಿಡುಗಡೆಯಾಗುತ್ತಿದೆ.
ಈ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. ಜನರ ಅಭಿರುಚಿ, ಮನಸ್ಥಿತಿ, ಚಿತ್ರಗಳ ಶೈಲಿ ಎಲ್ಲವೂ ಬೇರೆಯಾಗಿದೆ. ಹೀಗಿರುವಾಗ, ‘ಅವತಾರ ಪುರುಷ’ ಬಗ್ಗೆ ಏನನ್ನುತ್ತೀರಿ? ಎಂದರೆ, ಸರಿಯಾದ ಸಮಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಉತ್ತರ ಅವರಿಂದ ಬರುತ್ತದೆ.
ಬದಲಾವಣೆಗೆ ಪೂರಕ ಕಥೆ: ‘ಕಾಕತಾಳೀಯವೋ ಅಥವಾ ನಮ್ಮ ಅದೃಷ್ಟವೋ ಗೊತ್ತಿಲ್ಲ. ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಓಟಿಟಿ ಬಂದಿದೆ. ಯೂಟ್ಯೂಬ್ ಇನ್ನಷ್ಟು ಪ್ರಖರವಾಗಿದೆ. ಹಲವು ಯೂಟ್ಯೂಬ್ ಚಾನಲ್ಗಳು, ಬ್ಲಾಗರ್ಸ್, ವ್ಲಾಗರ್ಸ್ ಎಲ್ಲವೂ ಹೆಚ್ಚಾಗಿವೆ. ಈ ಹಿಂದೆಯೂ ಇವೆಲ್ಲ ಅಸ್ತಿತ್ವದಲ್ಲಿದ್ದರೂ, ನಮಗೆ ಹೆಚ್ಚು ಗೊತ್ತಿರಲಿಲ್ಲ. ನಾನು ಕೊನೆಯ ಸಿನಿಮಾ ಮಾಡಿದಾಗ, ಯೂಟ್ಯೂಬ್ಗಂತಲೇ ಪ್ರಮೋಷನ್ ಮಾಡುವುದು ಅಂತಿರಲಿಲ್ಲ. ಇನ್ನು, ಓಟಿಟಿಯಲ್ಲಿ ನೇರವಾಗಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ವೆಬ್ ಸೀರೀಸ್ ಹೆಚ್ಚಾಗುತ್ತಿವೆ. ಮೂರು ವರ್ಷಗಳ ಹಿಂದೆ ಇದೆಲ್ಲದರ ಬಗ್ಗೆ ಅಷ್ಟಾಗಿ ಕೇಳಿರಲಿಲ್ಲ. ಆದರೆ, ಈ ಸಿನಿಮಾ ಈಗ ಕೈಗೆತ್ತಿಕೊಂಡಿದ್ದರೂ, ಈಗೇನು ಬದಲಾವಣೆಗಳು ಆಗಿವೆಯೋ, ಅದಕ್ಕೆ ಪೂರಕವೆನ್ನುವಂತಹ ಕಥೆಗಳನ್ನು ನಾವು ಅಂದೇ ಓಕೆ ಮಾಡಿದ್ದೆವು ಅಂತನಿಸ್ಸುತ್ತಿದೆ’ ಎನ್ನುತ್ತಾರೆ ಶರಣ್.
ವಿಭಿನ್ನ ಮಾಡುವ ಅನಿವಾರ್ಯತೆ: ‘ಬಹುಶ@ ನಾನು ಈಗ ಒಪ್ಪಿದ್ದರೂ, ಇದೇ ತರಹದ ಸಿನಿಮಾಗಳನ್ನು ಮಾಡುತ್ತಿದ್ದೆನೇನೋ? ಮೂರು ವರ್ಷದ ಹಿಂದೆ, ಏನೋ ಬೇರೆ ಪ್ರಯತ್ನ ಮಾಡಬೇಕು ಎಂಬ ನಿಲುವು ಈಗ ಸಮಂಜಸ ಎನಿಸುತ್ತಿದೆ. ಆಗ ಒಂದು ಪ್ರಯತ್ನವಾಗಿ ಶುರುವಾಗಿದ್ದು, ಈಗ ಅನಿವಾರ್ಯವಾಗಿದೆ. ಈಗ ಬೇರೇನೋ ಮಾಡಬೇಕು ಎಂಬ ಅನಿವಾರ್ಯತೆ ನಿರ್ಮಾಣವಾಗಿದ್ದು, ಅದು ಕೂಡಿ ಬಂದಿದೆ’ ಎನ್ನುತ್ತಾರೆ ಶರಣ್.
ಸ್ಕ್ರಿಪ್ಟ್ ಸಿಕ್ಕಿದ್ದು ಅದೃಷ್ಟ: ಹೊಸ ತರಹದ ಸಿನಿಮಾಗಳನ್ನು ಮಾಡುವುದುಕ್ಕೆ ನಾನು ಯಾವಾಗಲೂ ಓಪನ್ ಆಗಿರುತ್ತೇನೆ. ಚಿತ್ರದಿಂದ ಚಿತ್ರಕ್ಕೆ ಪ್ರಯೋಗ ಮಾಡುತ್ತಲೇ ಇರುತ್ತೇನೆ. ಯಾವುದೋ ಒಂದಕ್ಕೆ ಟ್ರೆಂಡ್ಗೆ ಅಥವಾ ಜಾನರ್ಗೆ ಅಂಟಿಕೊಂಡಿಲ್ಲ. ಈ ಚಿತ್ರ ಒಪು$್ಪವುದಕ್ಕೆ ನನಗೆ ಹೆಚ್ಚು ಸಮಯ ಬೇಕಾಗಲೇ ಇಲ್ಲ. ಮೊದಲ ಮೀಟಿಂಗ್ನಲ್ಲೇ ಒಕೆ ಮಾಡಿರುವ ಚಿತ್ರವಿದು. ಇದೆಲ್ಲ ಕ್ರೆಡಿಟ್ ಸುನಿಗೆ ಸಲ್ಲಬೇಕು. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು. ಇಂಥದ್ದೊಂದು ಸ್ಕ್ರಿಪ್ಟ್ ನನಗೆ ಸಿಕ್ಕಿತು ಎನ್ನುವುದೇ ನನ್ನ ಅದೃಷ್ಟ’ ಎನ್ನುತ್ತಾರೆ.