ಮೈಸೂರು: ಸಮಾಜದಲ್ಲಿ ಲೈಗಿಂಕ ಅಲ್ಪಸಂಖ್ಯಾತರನ್ನು ಕೀಳಾಗಿ ನೋಡುತ್ತಿರುವ ಬೆಳವಣಿಗೆಗಳು ಮುಂದುವರೆದಿದ್ದರೂ ಕೂಡ ಇದಾವುದಕ್ಕೂ ಗಮನಕೊಡದೆ ಇತರರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ದೀಪಾ ಬುದ್ಧೆ ಎಚ್.ಜಿ. ದೀಪಾ (32) ತೋರಿಸಿಕೊಟ್ಟಿದ್ದಾರೆ.
ತಾನು ‘ತೃತೀಯ ಲಿಂಗಿ’ ಎಂದೇ ಘೋಷಿಸಿಕೊಂಡಿರುವ ದೀಪಾ ಬುದ್ಧೆಯವರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಪಿಹೆಚ್ಡಿ ಆರಂಭಿಸಿದ್ದಾರೆ. ಜತೆಗೆ ಪಿಹೆಚ್ಡಿ ಮಾಡುತ್ತಿರುವ ‘ಕರ್ನಾಟಕದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಗ್ರಾಮದಲ್ಲಿ ಕೂಲಿ ಮಾಡುವ ದಂಪತಿಯ ಐವರು ಮಕ್ಕಳಲ್ಲಿ ದೀಪಾ ಒಬ್ಬರು. ಪಿಯು ಮುಗಿಸುವ ಹೊತ್ತಿಗೆ ಮನೆ ಬಿಟ್ಟ ಅವರು, 2015ರಲ್ಲಿ ಪದವಿ ಪಡೆದು ಕೆಲಕಾಲ ವಿದ್ಯಾಭ್ಯಾಸ ನಿಲ್ಲಿಸಿದರು. 2016ರಲ್ಲಿ ಅರ್ಜಿ ತುಂಬಲು ತೃತೀಯ ಲಿಂಗಿ ಕಾಲಂ ಬೇಕೆಂದು ಹಟ ಹಿಡಿದು, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದರು. ಶೇ 84ರಷ್ಟು ಅಂಕಗಳೊಂದಿಗೆ ಎಂ.ಎ ಪೂರೈಸಿದರು.
ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಮತಾ ಸೊಸೈಟಿಯಲ್ಲಿ ಅರೆಕಾಲಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಲೇ ಸಂತೆಮರಹಳ್ಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದೀಪಾ ಅವರು ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಇದಾದ, ಕೆಲವೇ ವರ್ಷಗಳಲ್ಲಿ, ಅವರು ಸೊಸೈಟಿಯ ಪ್ರಾಜೆಕ್ಟ್ ಮ್ಯಾನೇಜರ್ ಆದರು ಮತ್ತು 2018 ರಲ್ಲಿ ಅದರ ಅಧ್ಯಕ್ಷರೂ ಆದರು. ಬಳಿಕ ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇದೀಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಜೆ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ, ಮೈಸೂರು-ಚಾಮರಾಜನಗರ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳು: ಜೀವನ ಮತ್ತು ಹೋರಾಟದ ಕುರಿತು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
ಕುಟುಂಬ ಬಿಟ್ಟು ಹೋಗಿ ಅಲ್ಪಸಂಖ್ಯಾತರ ಸಮುದಾಯ ಸೇರಿದ್ದ ದೀಪಾ ಅವರನ್ನು ಕುಟುಂಬಸ್ಥರು ತಿರಸ್ಕರಿಸಿದ್ದರು, 12 ವರ್ಷಗಳಾದರೂ ಇನ್ನೂ ದೀಪಾ ಅವರು ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ.