ಬೆಂಗಳೂರು: ಸಾರಿಗೆ ಬಸ್ ಗಳಲ್ಲಿ ಸ್ಪೋಟಕ, ನಿಷೇಧಿತ ಸಾಮಗ್ರಿಗಳನ್ನು ಸಾಗಿಸೋದು ಅಪರಾಧವಾಗಿದೆ. ಒಂದು ವೇಳೆ ಹೀಗೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ರೇ.. ಅವರ ವಿರುದ್ಧ ಕೇಸ್ ಫಿಕ್ಸ್.. ಜೈಲೂಟ ಕಾಯಂ. ಇದೇ ಕಾರಣದಿಂದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ( KSRTC Bus ) ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದಂತ ಪ್ರಯಾಣಿಕನೊಬ್ಬನನ್ನು ಕಂಡಕ್ಟರ್, ಸಾರ್..
ಬ್ಯಾಗ್ ನಲ್ಲಿ ಏನ್ ಇದೆ.. ಅಂತ ಕೇಳಿದ್ದೇ ತಡ.. ಮುಂದೆ ಆಗಿದ್ದೇ ಬೇರೆಯಾಗಿತ್ತು. ಅದೇನ್ ಅಂತ ಮುಂದೆ ಓದಿ..
ಕಳೆದ ಮೇ.3, 2022ರಂದು ಬೆಂಗಳೂರು – ವೇಲೂರು ಮಾರ್ಗವಾಗಿ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಅನ್ನು, ಲಾಲ್ ಬಾಗ್ ಸಮೀಪ ಬಂದ ಸಂದರ್ಭದಲ್ಲಿ ಪ್ರಯಾಣಿಕನೊಬ್ಬ ಹತ್ತಿದ್ದಾನೆ. ನಿರ್ವಾಹಕ ಮಂಜುನಾಥ್ ಬಿ.ಸಿ ಎಂಬುವರು ಏಲ್ಲಿಗೆ ಹೋಗಬೇಕು ಅಂದಾಗ ಕೊನೆಯ ಸೀಟಿನಲ್ಲಿ ಕುಳಿತಿದ್ದಂತ ಆತ, ಆಂಬೂರಿಗೆ ಟಿಕೆಟ್ ಕೂಡ ಪಡೆದಿದ್ದಾನೆ.
ಹೀಗೆ ಟಿಕೆಟ್ ಪಡೆದ ನಂತ್ರ, ಆ ಪ್ರಯಾಣಿಕ ಯಾಕೋ ಗಲಿಬಿಲಿ, ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿದಂತ ಕಂಡಕ್ಟರ್. ಆ ಪ್ರಯಾಣಿಕನ ಬಳಿಯಲ್ಲಿ ಇರುವಂತ ಬ್ಯಾಗ್ ನಲ್ಲಿ ಏನಾದ್ರೂ ಅನುಮಾನಾಸ್ಪದ ವಸ್ತುಗಳು, ಸ್ಪೋಟಕಗಳು ಇರಬಹುದಾ ಎಂಬುದಾಗಿ ಅನುಮಾನಗೊಂಡಿದ್ದಾರೆ. ಕೂಡಲೇ ಸಾರ್ ಯಾಕ್ ಗಾಬರಿಯಾಗಿದ್ದೀರಿ. ನಿಮ್ಮ ಬ್ಯಾಗ್ ನಲ್ಲಿ ಏನ್ ಇದೆ ಎಂಬುದಾಗಿ ಕೇಳಿದ್ದಾರೆ. ಹೀಗೆ ಕೇಳಿದ ಕೂಡಲೇ ಮತ್ತಷ್ಟು ಅನುಮಾನಾಸ್ಪದವಾಗಿ ವರ್ತಿಸಿದಂತ ಆ ಪ್ರಯಾಣಿಕ, ಬ್ಯಾಗ್ ಪರಿಶೀಲನೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್ ಲಾಲ್ ಬಾಗ್ ನಿಂದ ಬಿಟ್ಟು, ಮಡಿವಾಳ ಬಸ್ ನಿಲ್ದಾಣದ ಬಳಿಯಲ್ಲಿ ಪ್ರಯಾಣಿಕರು ಹತ್ತೋದಕ್ಕೆ ನಿಲ್ಲಿಸಿದಾಗ, ಹತ್ತುವ ಪ್ರಯಾಣಿಕರನ್ನು ತಳ್ಳಿ ಕೊಂಡು ಬ್ಯಾಗ್ ಬಿಟ್ಟು ಇಳಿದು ಪರಾರಿಯಾಗಿದ್ದಾನೆ. ಹಿಡಿಯಲು ಯತ್ನಿಸಿದ್ರೂ ಸಿಕ್ಕದೇ ತಪ್ಪಿಸಿಕೊಂಡು ಹೋಗಿದ್ದಾನೆ. ಆಗ ನಿರ್ವಾಹಕರು ಆ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ 7 ವಿವಿಧ ಕಂಪನಿಯ ಲ್ಯಾಪ್ ಟಾಪ್ ಮತ್ತು 7 ಮೊಬೈಲ್ ಕಂಡು ಬಂದಿದೆ. ಕೂಡಲೇ ಈ ಮಾಹಿತಿಯನ್ನು ಕೆ ಎಸ್ ಆರ್ ಟಿಸಿಯ 6ನೇ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಆಗ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಬಸವನಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.