ಬಿಹಾರ: ರೈಲಿನ ಲೊಕೊ ಪೈಲಟ್ ( ಚಾಲಕ) ಅರ್ಧ ದಾರಿಯಲ್ಲಿ ರೈಲು ನಿಲ್ಲಿಸಿ ಟೀ ಕುಡಿಯಲು ತೆರಳಿದ ಸುದ್ದಿ ಇತ್ತೀಚಿಗೆ ವರದಿಯಾಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಇಲ್ಲಿ ಬೇಜವಾಬ್ದಾರಿ ಲೊಕೊ ಪೈಲಟ್ ಅರ್ಧ ದಾರಿಯಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಿ ಮದ್ಯ ಸೇವಿಸಲು ತೆರಳಿದ್ದಾನೆ.
ಬಿಹಾರದ ಸಮಸ್ತಿಪುರ್-ಖಗಾರಿಯಾ ನಡುವಿನ ರೈಲು ಮಾರ್ಗದ ಹಸನ್‌ಪುರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ನಿಲ್ದಾಣದಲ್ಲಿ ನಿಂತ ರೈಲು ಎಷ್ಟೇ ಹೊತ್ತಾದರೂ ಹೊರಡ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇಳೆ ರೈಲಿನ ಲೋಕೋ ಪೈಲೆಟ್ ರೈಲು ನಿಲ್ಲಿಸಿ ಎಲ್ಲೋ ಹೋಗಿರುವುದು ಗೊತ್ತಾಗಿದೆ. ರೈಲ್ವೆ ಅಧಿಕಾರಿಗಳು ಆತನಿಗಾಗಿ ಹುಡುಕಾಟ ಆರಂಭಿಸಿದಾಗ, ನಿಲ್ದಾಣದ ಹಿಂಬದಿ ಲೋಕೋ ಪೈಲೆಟ್ ಎಣ್ಣೆ ಮತ್ತಿನಲ್ಲಿ ಬಿದ್ದಿದ್ದ. ಆತನ ಕೈಯಲ್ಲಿ ಅರ್ಧ ಕುಡಿದ ಮದ್ಯದ ಬಾಟಲಿ ಕೂಡ ಇತ್ತು. ತಕ್ಷಣ ರೈಲು ಹೊರಡಲು ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡಿದರು. ರೈಲ್ವೆ ಪೊಲೀಸರು ಎಣ್ಣೆ ಮತ್ತಿನಲ್ಲಿದ್ದ ಲೋಕೋ ಪೈಲೆಟ್ ಅನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಆಗಿ ಮೂರು ವರ್ಷ ಕಳೆದಿದೆ. ಆದರೆ, ರೈಲು ಚಾಲಕ ನಿಲ್ದಾಣ ಬಳಿಯೇ ಎಣ್ಣೆ ಹಾಕಿ ಬಾಟಲಿ ಸಮೇತ ಮಲಗಿದ್ದ.