ಮುಂಬೈ: ಮಹಾರಾಷ್ಟ್ರದಲ್ಲಿ ಆಜಾನ್ ಮತ್ತು ಹನುಮಾನ್ ಚಾಲೀಸಾ ವಿವಾದ ತಾರಕಕ್ಕೇರಿದೆ. ಧ್ವನಿವರ್ಧಕಗಳನ್ನು ಬಳಸುವ ಕುರಿತು ಸುಪ್ರೀಂಕೋರ್ಟ್ ಏನು ಆದೇಶ ಹೊರಡಿಸಿದೆಯೋ ಅದನ್ನು ಪಾಲನೆ ಮಾಡದಿದ್ದರೆ ಆಜಾನ್ ಕೇಳಿಸುವ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ನಿನ್ನೆ (ಮೇ 3) ಕರೆ ನೀಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಬಹಿರಂಗ ಪತ್ರ ಬರೆದಿದ್ದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಮೂಲಕ ಆಜಾನ್ ನುಡಿಸದಂತೆ ಈಗಾಗಲೇ ಸೂಚನೆ ನೀಡಿದೆ. ಇದರಿಂದ ಚಿಕ್ಕಮಕ್ಕಳು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರ ಹೊರತಾಗಿ ಕೂಡ ಧ್ವನಿವರ್ಧಕ ಕೇಳಿ ಬರುತ್ತಿದ್ದು, ನಿಮ್ಮ ಕಿವಿಗಳ ಮೇಲೆ ಅವುಗಳ ಶಬ್ದ ಬಿದ್ದರೆ, ಅಂತಹ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಿ ಎಂದು ಕರೆ ಕೊಟ್ಟಿದ್ದರು.
ಹೀಗಿದ್ದರೂ ಕೋರ್ಟ್ ಆದೇಶ ಪಾಲನೆ ಆಗಿರಲಿಲ್ಲ. ಇದರಿಂದಾಗಿ ಮುಂಬೈನಲ್ಲಿರುವ ಮಸೀದಿ ಬಳಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಹನುಮಾನ್ ಚಾಲೀಸಾ ಜತೆಗೆ ಜೈ ಶ್ರೀರಾಮ್ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾ. ಜೈ ಸೋ’ ಎಂಬ ಘೋಷಣೆಯೂ ಮೊಳಗಿದೆ. ಇದೀಗ ಮಹಾರಾಷ್ಟ್ರವನ್ನು ಉದ್ವಿಗ್ನ ಪರಿಸ್ಥಿತಿಗೆ ದೂಡಿದೆ.