ಬೆಂಗಳೂರು, ಏ. 29: ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಸಿಕ್ಕಿ ಬೀಳುತ್ತಿದ್ದಂತೆ ಕೆಲವು ಪ್ರಭಾವಿ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ದಿವ್ಯಾ ಹಾಗರಗಿ ಮಹಾರಾಷ್ಟ್ರದ ಪುಣೆಯಲ್ಲಿ ಸಿಕ್ಕಿ ಬಿದ್ದಿದ್ದು, ಆಕೆಗೆ ಆಶ್ರಯ ನೀಡಿದ ವ್ಯಕ್ತಿಯನ್ನೂ ಸಹ ಸಿಐಡಿ ಪೊಲೀಸರು ಎಳೆದು ತಂದಿದ್ದಾರೆ.
ನ್ಯಾಯಾಲಯ ಅರೆಸ್ಟ್ ವಾರಂಟ್ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದು ಪಡಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ದಿವ್ಯಾ ಹಾಗರಗಿ ಜತೆ ಸಂಪರ್ಕ ಹೊಂದಿರುವರ ಎದೆಯಲ್ಲಿ ನಡುಕ ಶುರುವಾಗಿದೆ.
ಹಾಗರಗಿ ನೆಟ್‌ವರ್ಕ್:
ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯ ಒಡತಿಯಾಗಿರುವ ದಿವ್ಯಾ ಹಾಗರಗಿ ದೊಡ್ಡ ದೊಡ್ಡ ರಾಜಕೀಯ ನಾಯಕರ ಸಂಪರ್ಕ ಬೆಳೆಸಿದ್ದಾರೆ. ಬಿಜೆಪಿಯಲ್ಲಿ ಜಿಲ್ಲಾ ಮಟ್ಟದ ನಾಯಕರಿಯಾಗಿರುವ ದಿವ್ಯಾ ಹಾಗರಗಿ ತಾನು ಮಾಡಿರುವ ಅಕ್ರಮಗಳಿಗೆ ನೆರಳಾಗಿ ರಾಜಕೀಯ ನಾಯಕರ ಸಂಪರ್ಕ ಬೆಳೆಸಿದ್ದರೇ ಎಂಬ ಅನುಮಾನ ಮೂಡಿದೆ.
ದಿವ್ಯಾ ಹಾಗರಗಿ ಅವರ ಮನೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೋಗಿ ಬಂದಿದ್ದಾರೆ. ಕಲಬುರಗಿ ಪ್ರವೇಶ ಹೋದಾಗಲೆಲ್ಲಾ ಯಡಿಯೂರಪ್ಪ ದಿವ್ಯಾ ಹಾಗರಗಿ ಮನಗೆ ಹೋಗಿ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಅವರ ಮನೆಗೆ ಹೋಗಿ ಸನ್ಮಾನ ಸ್ವೀಕರಿಸಿವ ಪೋಟೋಗಳು ವೈರಲ್ ಆಗಿವೆ. ಆರೋಗ್ಯ ಸಚಿವ ಸುಧಾಕರ್, ಸಾರಿಗೆ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಅನೇಕರ ಒಡನಾಟವಿದೆ. ಪಕ್ಷದಲ್ಲಿ ದೊಡ್ಡ ನಾಯಕಿಯಾಗಿ ಬಿಂಬಿಸಿಕೊಂಡಿರುವ ದಿವ್ಯ ಹಾಗರಗಿ ಸಂಪರ್ಕ ಬಾಹು ಕೇವಲ ಬಿಜೆಪಿಗೆ ಸೀಮಿತವಾಗಿಲ್ಲ. 2018 ರಲ್ಲಿ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿತ್ತು.
ಅಧಿಕಾರಿಗಳು ಸಂಪರ್ಕ:
ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಹಲವು ಉನ್ನತ ಅಧಿಕಾರಿಗಳ ಸಂಪರ್ಕ ಸಾಧಿಸಿದ್ದರು ಎನ್ನಲಾಗಿದೆ. ಈಗಾಗಲೇ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ಜತೆ ದಿವ್ಯಾ ಕಾಣಿಸಿಕೊಂಡಿದ್ದ ಪೋಟೋ ವೈರಲ್ ಆಗಿತ್ತು. ಇದೇ ರೀತಿ ವಿವಿಧ ಇಲಾಖೆಗಳ ಅಧಿಕಾರಿಗಳು ದಿವ್ಯಾ ಹಾಗರಗಿ ಜತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪಿಎಸ್‌ಐ ನೇಮಕಾತಿ ಅಕ್ರಮದ ವೇಳೆ ಯಾರೆಲ್ಲಾ ರಾಜಕಾರಣಿಗಳನ್ನು ಸಂಪರ್ಕಸಿದ್ದರು. ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳು ಸಂಪರ್ಕದಲ್ಲಿದ್ದರು ಅವರಿಗೆ ನಡುಕ ಶುರವಾಗಿದೆ. ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದ ಆಜು ಬಾಜು ದಿವ್ಯಾ ಹಾಗರಗಿಯನ್ನು ಭೇಟಿ ಮಾಡಿರುವ ನಾಯಕರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಆಚ್ಚರಿ ಪಡಬೇಕಿಲ್ಲ.