ಬೆಂಗಳೂರು,ಏ.27- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಮೇ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಲಾಬಿ ಕೂಡ ಜೋರಾಗುತ್ತಿದೆ.
ಚುನಾವಣೆಗೆ ಒಂದೇ ವರ್ಷ ಬಾಕಿ ಇರುವುದರಿಂದ ಶತಾಯಗತಾಯ ಈ ಬಾರಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಆಕಾಂಕ್ಷಿಗಳು ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ.
ಕೆಲವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಎಡತಾಕಿದರೆ, ಇನ್ನು ಕೆಲವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಮತ್ತಿತರ ನಾಯಕರ ಮನೆ ಬಾಗಿಲು ಬಡೆಯುತ್ತಿದ್ದಾರೆ.
ಸದ್ಯ ಸಂಪುಟದಲ್ಲಿ 5 ಸ್ಥಾನಗಳು ಖಾಲಿಯಿದ್ದು, ಈ ಬಾರಿ ಕೆಲವು ಸಚಿವರನ್ನು ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 6ರಿಂದ 8 ಸಚಿವರನ್ನು ಕೈಬಿಟ್ಟರೆ 11ರಿಂದ 13 ಸ್ಥಾನಗಳು ಖಾಲಿಯಾಗಲಿದ್ದು, ತೆರವಾಗಲಿರುವ ಈ ಸ್ಥಾನಗಳಿಗೆ ಸುಮಾರು 3 ಡಜನ್ ಶಾಸಕರು ಕಣ್ಣಿಟ್ಟಿದ್ದಾರೆ.
ಈ ಬಾರಿ ಸಂಪುಟದಲ್ಲಿ ತಮಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಅಚಲವಾದ ನಂಬಿಕೆ ಇಟ್ಟುಕೊಂಡಿರುವವರು ಯಾರೊಬ್ಬರ ಮೊರೆ ಹೋಗಿಲ್ಲ. ಸಿಗಲೂಬಹುದು, ಸಿಗದೇ ಇರಬಹುದು ಎಂಬ ಹೊಯ್ದಾಟದಲ್ಲಿರುವವರು ಮಾತ್ರ ಬೆಂಗಳೂರು ಮತ್ತು ದೆಹಲಿ ನಾಯಕರ ಎದುರು ನೋಡುತ್ತಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಆಕಾಂಕ್ಷಿಗಳಾಗಿರುವ ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ರಾಜುಗೌಡ ನಾಯಕ್, ಮಾಡಾಳು ವಿರೂಪಾಕ್ಷಪ್ಪ, ಹರತಾಳ್ ಹಾಲಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅರವಿಂದಬ ಬೆಲ್ಲದ್, ಎಸ್.ಎ.ರಾಮದಾಸ್, ಎನ್.ಮಹೇಶ್, ಕರುಣಾಕರ ರೆಡ್ಡಿ ಸೇರಿದಂತೆ ಸರಿಸುಮಾರು ಮೂರು ಡಜನ್ ಶಾಸಕರು ಕುರ್ಚಿಗೆ ಟವಲ್ ಹಾಕಲು ಸಿದ್ದತೆ ನಡೆಸಿದ್ದಾರೆ.
ಇದೇ 30ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಪಡೆಯಲು ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಸಿಪಿ ಯೋಗೇಶ್ವರ್, ಆನಂದ್ ಮಾಮನಿ ಸೇರಿದಂತೆ ಹಲವರು ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.
ಏ.29ರ ಸಂಜೆ ಸಿಎಂ ದೆಹಲಿಗೆ ತೆರಳುತ್ತಿದ್ದು, ಏಪ್ರಿಲ್ 30ರಂದು ಹೈಕೋರ್ಟ್ ನ್ಯಾಯೀಶರ ಹಾಗೂ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೈಕಮಾಂಡ್ ನಾಯಕರ ಭೇಟಿಗೆ ಸಿಎಂ ಅನುಮತಿ ಕೋರಿದ್ದು, ಇನ್ನು ಭೇಟಿಗೆ ಸಮಯ ನಿಗದಿಯಾಗಿಲ್ಲ. ಹಾಗಾಗಿ ದೆಹಲಿಗೆ ಟಿಕೆಟ್ ಕಾಯ್ದಿರಿಸಿರುವ ಸಿಎಂ, ವಾಪಸ್ ಬರುವ ಆಯ್ಕೆಯನ್ನು ಕಾಯ್ದಿರಿಸಿಕೊಂಡಿದ್ದಾರೆ.