ವಿಜಯನಗರ: ಈ ಬಾರಿಯ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷರು ಹಾಗೂ ಶ್ವಾಸಕೇಂದ್ರದ ಸಂಸ್ಥಾಪಕರಾದ ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳು ತಿಳಿಸಿದರು.
ಇಂದು ವಚನಾನಂದ ಮಹಾಸ್ವಾಮೀಜಿಗಳು, ಪ್ರವಾಸೋದ್ಯಮ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರೊಂದಿಗೆ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊಪ್ಪಳದ ಹನುಮನ ಜನ್ಮಸ್ಥಳ ಅಂಜನಾದ್ರಿಯಲ್ಲಿ, ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಯೋಗ ಉತ್ಸವಗಳನ್ನು ಯಶಸ್ವಿಯಾಗಿ ಆಚರಿಸಲಾಗಿದೆ. ಮುಂಬರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯವಂತೆ ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದರು
ಈ ನಿಟ್ಟಿನಲ್ಲಿ ಇಂದು ಹಂಪಿಯ ಸ್ಮಾರಕಗಳಾದ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ರಥ, ಲೋಟಸ್ ಮಹಲ್, ವಿರುಪಾಕ್ಷೇಶ್ವರ ದೇವಾಲಯ, ಆನೆ ಮತ್ತು ಕುದುರೆ ಲಾಯಗಳು, ಸಾಸುವೇ ಕಾಳು ಗಣೇಶ, ಬಡವಿ ಲಿಂಗ ಸೇರಿದಂತೆ ಹಲವಾರು ಸ್ಮಾರಕಗಳ ಮುಂದೆ ಯೋಗ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಪರಿಶೀಲನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಸ್ಮಾರಕದ ಮುಂದೆಯೂ ಕೌಂಟ್ ಡೌನ್ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನದಂದು ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು.