ರಾಯಚೂರು: ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ನಟ ಕಿಚ್ಚ ಸುದೀಪ್ ಮಹರ್ಷಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದರು. ಈ ಹಿಂದೆ ಸುದೀಪ್ ಅಭಿಮಾನಿಗಳು ಸುದೀಪ್ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿದ್ದರು. ಆದ್ರೆ ಸುದೀಪ್ ತಮ್ಮ ಮೂರ್ತಿ ಸ್ಥಾಪನೆಗೆ ಒಪ್ಪದ ಹಿನ್ನೆಲೆ ವಿಚಾರ ಕೈಬಿಡಲಾಗಿತ್ತು.
ರಾಯಚೂರಿನ ಸಿರವಾರ ತಾಲೂಕಿನ ಕುರಕುಂದದಲ್ಲಿ ಮಾತನಾಡುವ ಸುದೀಪ್, ನನ್ನ ಮೂರ್ತಿ ಪ್ರತಿಷ್ಟಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಶರಣು. ನನ್ನ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ ಅದಕ್ಕೆ ಬೇಡ ಅಂದೆ. ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ ಅವರಿಗೆ ಗೌರವ ಸಲ್ಲಬೇಕು, ನಾನು ಅಷ್ಟು ದೊಡ್ಡವನಲ್ಲ. ನಾನು ಸಾಧನೆ ಮಾಡಬೇಕಾದದ್ದು ತುಂಬಾ ಇದೆ. ಮುಂದೆ ಅಂತ ದಿನ ಬಂದಾಗ ನನ್ನ ಮೂರ್ತಿ ಇಡಲಿ ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆ ನನಗೆ ಗೊತ್ತಾಗಿದ್ದು, ಮೊದಲೇ ಬೇಡ ಅಂತಿದ್ದೆ ಎಂದರು.
ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲ. ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಸಿನಿಮಾದಿಂದ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು. ಅದರ ಬಗ್ಗೆ ಕಾಳಜಿ, ಜವಾಬ್ದಾರಿ ನನಗಿದೆ. ಇವತ್ತು ಏನೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು ಸಿನಿಮಾದಿಂದ ಬಂದ ದುಡ್ಡಲ್ಲಿ ಮಾಡುತ್ತಿದ್ದೇವೆ ಎಂದರು.