Breaking News

ಅಂಗವಿಕಲರಿಗೆ ಖಾತ್ರಿ ‘ಆಸರೆ’: ಕೆಲಸದಲ್ಲಿ ಶೇ 50 ವಿನಾಯಿತಿ, ಪೂರ್ತಿ ಕೂಲಿ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂಗವಿಕಲರಿಗೆ ಕೆಲಸ ನೀಡುವುದಕ್ಕೆ ಆದ್ಯತೆ ಕೊಡಲಾಗುತ್ತಿದೆ.

18 ವರ್ಷ ಮೇಲ್ಪಟ್ಟ ಅಶಕ್ತರಿಗೆ ಉದ್ಯೋಗ ಒದಗಿಸಿ, ಅವರಿಗೆ ಸ್ವಾವಲಂಬಿ ಬದುಕು ನಡೆಸುವುದಕ್ಕೆ ನೆರವಾಗಲು ಯೋಜನೆ ಬಳಸಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಗ್ರಾಮೀಣ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಐಇಸಿ ಸಂಯೋಜಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಏ.1ರಿಂದ ಕೂಲಿಯನ್ನು ₹289ರಿಂದ ₹309 ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ನಾಲೆಗಳ ನಿರ್ಮಾಣ, ರಾಜಕಾಲುವೆಗಳ ಅಭಿವೃದ್ಧಿ, ಬದುಗಳ ನಿರ್ಮಾಣ, ಪೌಷ್ಟಿಕ ಕೈತೋಟ ನಿರ್ಮಾಣ, ಮಳೆ ನೀರು ಸಂಗ್ರಹ, ಕೊಳವೆಬಾವಿಗಳ ಮರುಪೂರಣ, ಅರಣ್ಯೀಕರಣ ಮೊದಲಾದವುಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ. 50ರಷ್ಟು ವಿನಾಯತಿ ನೀಡಲಾಗಿದೆ.

ನೋಂದಣಿ ಪ್ರಕ್ರಿಯೆ: ಯೋಜನೆಯಲ್ಲಿ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಸೂಚಿಸಲಾಗಿದೆ. ವೈಕಲ್ಯ ಆಧರಿಸಿ, ಅವರು ಮಾಡಬಹುದಾದ ಕೆಲಸ ನೀಡುವಂತೆ ಆದೇಶಿಸಲಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ನೋಂದಣಿ ಪ್ರಕ್ರಿಯೆ ನಡೆದಿದೆ.

ಅಂಗವಿಕಲರು ಮಾಡಬಹುದಾದ ಒಟ್ಟು 24 ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಒಬ್ಬರೇ ಸ್ವತಂತ್ರವಾಗಿ ಮಾಡಬಹುದಾಗಿದ್ದರೆ ಅದಕ್ಕೆ ತಕ್ಕಂತೆ ಕೆಲಸ ಕೊಡಲಾಗುವುದು. ಇದರೊಂದಿಗೆ ಎಲ್ಲರನ್ನೂ ಒಳಗೊಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

11,037 ಅಂಗವಿಕಲರು ನೋಂದಣಿ: ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅಂಗವಿಕಲರ ಸಮೀಕ್ಷೆ ನಡೆಸಿ, ಅವರನ್ನು ನೋಂದಾಯಿಸಬೇಕು. ಅವರಿಗೆ ಉದ್ಯೋಗ ಚೀಟಿ ಒದಗಿಸಬೇಕು ಎಂದು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ 500 ಗ್ರಾಮ ಪಂಚಾಯ್ತಿಗಳಿವೆ. ಅವುಗಳ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2021-22ನೇ ಸಾಲಿನಲ್ಲಿ 11,037 ಅಂಗವಿಕಲರು ನೋಂದಾಯಿಸಿದ್ದಾರೆ. ಈ ಪೈಕಿ 2,319 ಮಂದಿ ಕೆಲಸ ಮಾಡಿದ್ದಾರೆ. ಆ ಸಾಲಿನಲ್ಲಿ 72,853 ಮಾನವ ದಿನಗಳನ್ನು ಸೃಜಿಸಲಾಗಿದೆ. ಜಾಗೃತಿ ಕೊರತೆಯಿಂದಾಗಿ ಹೆಚ್ಚಿನವರು ಸದ್ಬಳಕೆಗೆ ಮುಂದಾಗುತ್ತಿಲ್ಲ. ಇದನ್ನು ಪರಿಗಣಿಸಿ, 2022-23ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಮಂದಿ ಒಳಗೊಳಿಸಿಕೊಳ್ಳುವುದಕ್ಕಾಗಿ ಅಲ್ಲಲ್ಲಿ ಕಾರ್ಯಾಗಾರಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ನೋಂದಾಯಿಸಿದವರಿಗೆ ಉದ್ಯೋಗ ಚೀಟಿ ಒದಗಿಸಲಾಗುತ್ತಿದೆ. ಖಾತ್ರಿ ಯೋಜನೆಯೊಂದಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆಯೂ ತಿಳಿಸಲಾಗುತ್ತಿದೆ.

ಅವರಿಗೆ ಸಮೀಪದಲ್ಲೇ ಕೆಲಸ ಕೊಡಲಾಗುತ್ತಿದೆ. ಬೇಸಿಗೆಯಲ್ಲಿ ನಿರಂತರ ಕೆಲಸಕ್ಕಾಗಿ ಜೂನ್‌ ಅಂತ್ಯದವರೆಗೆ ದುಡಿಯೋಣ ಬಾ ಅಭಿಯಾನ ನಡೆಸಲಾಗುತ್ತಿದೆ. ನೀರು ದಿನಗಳ ಉದ್ಯೋಗ ಖಾತ್ರಿ ಇದೆ. ಅರ್ಧ ಕೆಲಸ ಮಾಡಿದರೂ ಕೂಲಿ ಹಣವನ್ನು ಪೂರ್ತಿಯಾಗಿ ಪಾವತಿಸಲಾಗುವುದು. ಮಳೆ ನೀರು ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಹಳ್ಳಿಗಳಲ್ಲಿ ಅಂಗವಿಕಲರಿಗೆ ಕೀಳರಿಮೆ ಹೋಗಲಾಡಿಸುವುದಕ್ಕೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಲಾಗುತ್ತಿದೆ. ಸಣ್ಣ ಪುಟ್ಟ ಕೆಲಸಗಳನ್ನು ಕೊಡಲಾಗುತ್ತಿದೆ. ಐಇಸಿ ಸಂಯೋಜಕರ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಯೋಜನೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ ಹಾಗೂ ಪ್ರೋತ್ಸಾಹ ಕೊಡಲಾಗುತ್ತಿದೆ’ ಎಂದು ಬೆಳಗಾವಿ ತಾಲ್ಲೂಕು ಪಂಚಾಯ್ತಿ ಇಒ ರಾಜೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಏನೇನು ಕೆಲಸಗಳು?

* ನೆಲ ಸಮತಟ್ಟು ಮಾಡುವುದು

* ಬದು ನಿರ್ಮಾಣ, ಗಿಡ ನೆಡುವುದು

* ಹೊಸ ಕಟ್ಟಡಗಳಿಗೆ ನೀರು ಹಾಕುವುದು

* ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು

* ಕಾಂಕ್ರೀಟ್, ಇಟ್ಟಿಗೆ ಸಾಗಿಸುವುದು

* ಬಾಂಡಲಿಗೆ ಮರಳು, ಕಲ್ಲು ತುಂಬಿಸುವುದು

* ಹಳ್ಳಕ್ಕೆ ಮಣ್ಣು ತುಂಬುವುದು

* ಗುಂಡಿ ತೆಗೆಯುವುದು, ಮಣ್ಣು ಸುರಿಯುವುದು

* ಕಾಂಕ್ರೀಟ್ ಸಾಮಗ್ರಿ ಸರಿಪಡಿಸುವುದು

* ಕೆಲಸಗಾರರ ಮಕ್ಕಳನ್ನು ನೋಡಿಕೊಳ್ಳುವುದು

* ತ್ಯಾಜ್ಯ ವಿಲೇವಾರಿ, ಕೆರೆಗಳಲ್ಲಿ ಹೂಳು ಎತ್ತುವುದು

***

ಆದ್ಯತೆ ಕೊಡುತ್ತಿದ್ದೇವೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಂಗವಿಕಲರಿಗೂ ನೆರವಾಗುತ್ತಿದ್ದೇವೆ.

-ಎಚ್‌.ವಿ. ದರ್ಶನ್‌, ಸಿಇಒ, ಜಿಲ್ಲಾ ಪಂಚಾಯ್ತಿ


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ