ಬೆಂಗಳೂರು: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್. ಅವರು ಹಿಂದೂ ಪರ ಅಲ್ಲ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಜ ವಿಚಾರಗಳನ್ನು ಮುಚ್ಚಿ ಹಾಕಲು ಕೆಲವರು ಏಜೆಂಟ್ ಮೂಲಕ ಹಿಂದುತ್ವ ಎಂದು ಶುರು ಮಾಡಿದ್ದಾರೆ. ಮುಸ್ಲಿಂ ಚಿನ್ನದ ಅಂಗಡಿಗಳಿಂದ ಚಿನ್ನ ಖರೀದಿ ಮಾಡಬಾರದು ಅಂತಾ ಫರ್ಮಾನು ಹೊರಡಿಸಿದ್ದಾರೆ. ಹಾಗಾದ್ರೆ ಮುಸ್ಲಿಂ ಸೇವಿಸಿದ ಗಾಳಿ ಹಿಂದೂ ಸೇವನೆ ಮಾಡಬಾರದು. ಮುಸ್ಲಿಂಗೆ ಬೇರೆ ಬಿಸಿಲು, ಹಿಂದೂಗೆ ಬೇರೆ ಬಿಸಿಲು ಅಂತಿದ್ದೀಯಾ? ಮುಸ್ಲಿ ರಕ್ತ ಕೆಂಪು, ಹಿಂದೂ ರಕ್ತ ಬೇರೆ ಏನಾದರೂ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದುತ್ವ ಪರ ಮಾತನಾಡುವವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಏನ್ ಮಾಡಲು ಹೊರಟಿದ್ದಾರೆ ಇವರು? ತಲೆಗಿಲೆ ಕೆಟ್ಟಿದ್ದೀಯಾ? ಮುತಾಲಿಕ್‍ಗೆ ಬಿಸಿಲು ಜಾಸ್ತಿ ಆಗಿದೆ ಎಂದು ಕಿಡಿಕಾರಿದರು. ಅವರು ಹಿಂದೂ ಪರ ಅಲ್ಲ. ಹಿಂದುತ್ವಪರ. ಹಿಂದೂ ಧರ್ಮ ವಿಶಾಲವಾದ ಧರ್ಮ, ಸಹಿಷ್ಣುತೆ ಇರುವ ಧರ್ಮ. ಆದ್ರೆ ರಾಜಕಾರಣಿಗಳಿಗೆ ಇವರು ಏಜೆಂಟ್ ಎಂದು ಆಕ್ರೋಶ ಹೊರಹಾಕಿದರು.