ಹೈದರಾಬಾದ್: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿರುವ ನಾಥುರಾಮ್ ಗೋಡ್ಸೆ ಅವರ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ರಾಮ್‍ರಾವ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ. ಪ್ರಧಾನಿ ಮೋದಿ ಮೌನವಾಗಿ ಮತ್ತು ನೇರವಾಗಿ ಗೋಡ್ಸೆಯ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗುಜರಾತ್ ಶಾಸಕನನ್ನು ಅಸ್ಸಾಂ ಪೊಲೀಸರು ಬಂಧಿಸುವಂತೆ ಮಾಡಿದ ಮೋದಿ ಸರ್ಕಾರಕ್ಕೆ ಧೈರ್ಯವಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಸಮಾಜದ ಕೆಲವು ವರ್ಗಗಳು ಬೆದರಿಕೆ ಮತ್ತು ಅಸುರಕ್ಷಿತ ಭಾವನೆಗಳನ್ನು ಅನುಭವಿಸುವ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಇದೆಲ್ಲವೂ ಸಂಪೂರ್ಣವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದ್ದರೂ ಪ್ರಧಾನಿ ಅವರು ಒಂದು ಮಾತನ್ನೂ ಹೇಳುತ್ತಿಲ್ಲ ಎಂದು ಕಿಡಿಕಾರಿದರು.