ಬೆಂಗಳೂರು: 545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಏ.23ರಂದು ಸುದ್ದಿಗೋಷ್ಠಿ ನಡೆಸಿ 2021ರ ಅಕ್ಟೋಬರ್ 3ರಂದು ನಡೆದ ಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ.
ಈ ಕುರಿತು ತಮ್ಮ ಬಳಿ ಸಾಕ್ಷ್ಯಗಳು ಇರುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದೀರಿ. ಈ ಪ್ರಕರಣ ಸೂಕ್ಷ್ಮ ಮತ್ತು ಗಂಭೀರವಾಗಿರುವ ಕಾರಣ ತಮ್ಮ ಬಳಿ ಲಭ್ಯವಿರುವ ಸಾಕ್ಷ್ಯಗಳನ್ನು ಸಿಐಡಿಗೆ ಒಪ್ಪಿಸಿ. ಸೋಮವಾರ ಮಧ್ಯಾಹ್ನ 11.30ಕ್ಕೆ ಅರಮನೆ ರಸ್ತೆ ಕಾರ್ಲಟನ್ ಹೌಸ್ ಸಿಐಡಿ ಕಚೇರಿ ಡಿವೈಎಸ್‌ಪಿ ಪಿ. ನರಸಿಂಹಮೂರ್ತಿ ಮುಂದೆ ಹಾಜರಾಗಿ ಸಾಕ್ಷ್ಯ ಒದಗಿಸಿ ಎಂದು ನೋಟಿಸ್‌ನಲ್ಲಿ ಸಿಐಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ನ ಕಲುಬುರಗಿ ಸ್ಥಳೀಯ ಮುಖಂಡರು ಬಂಧನಕ್ಕೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದ್ದು, ನಾಳೆ ಅವರು ಸಿಐಡಿ ಕಚೇರಿಗೆ ಹಾಜರಾಗುತ್ತಾರಾ ಎಂಬ ಕುತೂಹಲ ಮೂಡಿದೆ.