ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಳೆದ 5 ವರ್ಷಗಳಲ್ಲಿ ಕೈಗೊಂಡ ದಾಳಿಗಳ ಪೈಕಿ ಶೇ.51 ದಾಳಿಗಳು ಕಂದಾಯ, ನಗರಾಭಿವೃದ್ಧಿ, ಸಾರಿಗೆ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ್ದಾಗಿವೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಲ್ಲಿ ಎಸಿಬಿ 58 ದಾಳಿಗಳನ್ನು ನಡೆಸಿ ಕೋಟ್ಯಂತರ ರೂ.
ಭ್ರಷ್ಟಾಚಾರ ಬಯಲಿಗೆಳೆದಿದೆ. ನಗರಾಭಿವೃದ್ಧಿ-40, ಸಾರಿಗೆ-33 ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮೇಲೆ 29 ದಾಳಿಗಳನ್ನು ನಡೆಸಿದೆ. ಕಳೆದ 5 ವರ್ಷಗಳಲ್ಲಿ ಎಸಿಬಿಯಲ್ಲಿ ಅಕ್ರಮ ಆಸ್ತಿ ಕೇಸ್ಗೆ (ಡಿಎ) ಸಂಬಂಧಿಸಿದಂತೆ 310 ದಾಳಿ ಪ್ರಕರಣ ದಾಖಲಾಗಿದ್ದು, 371 ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ ಮುಟ್ಟಿಸಿದೆ. ಈ ಪೈಕಿ 63 ಕೇಸ್ಗಳಲ್ಲಿ ತನಿಖೆ ಮುಕ್ತಾಯಗೊಂಡಿದ್ದು, 223 ಪ್ರಕರಣಗಳಲ್ಲಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಒಟ್ಟು 1,803 ಪ್ರಕರಣ: ದಾಳಿಗೊಳಗಾದ ಅಧಿಕಾರಿಗಳು ಆದಾಯಕ್ಕಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿರುವುದಕ್ಕೆ ಸಾಕ್ಯ್ಷಾಧಾರಗಳು ಪತ್ತೆಯಾದರೂ, ಬೆರಳೆಣಿಕೆಯಷ್ಟು ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. 2016ರಿಂದ ಇದುವರೆಗೆ ಎಸಿಬಿಯಲ್ಲಿ ಒಟ್ಟು 1,803ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 650ಕ್ಕೂ ಹೆಚ್ಚಿನ ಕೇಸ್ಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. 85 ಪ್ರಕರಣಗಳಲ್ಲಿ ತನಿಖೆ ನಡೆಸಲು ನ್ಯಾಯಾಲಯಗಳಲ್ಲಿ ತಡೆಯಿದೆ. 1,473ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಎಸಿಬಿ ದಾಳಿಗೊಳಗಾದ 1,335 ಮಂದಿ ಸರ್ಕಾರಿ ನೌಕರರು ಸೇವೆಯಿಂದ ಅಮಾನತುಗೊಂಡಿದ್ದಾರೆ.