ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14ರಂದು ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಇದರ ನಡುವೆ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಎಂದು ಕರೆಸಿಕೊಳ್ಳುವ ಕಮಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ನೆಗಿಟಿವ್ ವಿಮರ್ಶೆ ನೀಡಿರುವುದು ಯಶ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಜಿಎಫ್ ಸಿನಿಮಾದ ಆರಂಭದ 30 ನಿಮಿಷ ಏನು ನಡೆಯುತ್ತಿದೆ ಎಂದು ಅರ್ಥ ಆಗಲಿಲ್ಲ. ಬರೀ ಡೈಲಾಗಳೇ ತುಂಬಿದ್ದವು. ಆರ್ಆರ್ಆರ್ಗಿಂತಲೂ ಕಡೆಯಾಗಿತ್ತು. ಇದೊಂದು ಕಳಪೆ ಸಿನಿಮಾ. ಸಿನಿಮಾದಲ್ಲಿ ಏನೇನು ಇಲ್ಲ. ಈ ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಇಂತಹ ಟಾಪ್ ಕ್ಲಾಸ್ ಲದ್ದಿ ಚಿತ್ರವನ್ನು ಮಾಡಿದ್ದಕ್ಕಾಗಿ ನಾಚಿಕೆಪಡಬೇಕು ಎಂದಿದ್ದಾರೆ.
KGF ಚಾಪ್ಟರ್ 2ನಂತಹ ಸಿನಿಮಾ ಮಾಡಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಮೂರ್ಖರನ್ನಾಗಿಸಿ ಲೂಟಿ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಜೀವಮಾನವಿಡೀ ಜೈಲಿನಲ್ಲಿ ಇಡಬೇಕು. ಮೇಕಿಂಗ್ ಹೆಸರಿನಲ್ಲಿ ಕೇವಲ ದುಂದುವೆಚ್ಚ ಮಾಡಲಾಗಿದೆ. ಕತೆಯೇ ಇಲ್ಲ. ಮೆದುಳೇ ಇಲ್ಲದ ಇಂತಹ ನಿರ್ದೇಶಕನನ್ನು ಯಾವೋಬ್ಬ ನಟನು ಪ್ರೋತ್ಸಾಹ ನೀಡಬಾರದು ಎಂದು ಟೀಕಿಸಿದ್ದಾರೆ.
ಭಾರತದ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯು ಕೇವಲ ಒಬ್ಬ ವ್ಯಕ್ತಿ ರಾಕಿ ಜತೆ ಹೋರಾಡಲು ಆಗಲಿಲ್ಲ. ಪ್ರಧಾನ ಮಂತ್ರಿಗಳಿಗೆ ಬೆದರಿಕೆ ಹಾಕಲು ರಾಕಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಎಂಟ್ರಿ ಕೊಡುತ್ತಾನೆ. ಅದ್ಭುತ! ಪ್ರಶಾಂತ್ ಭಾಯ್ ಈಗ, ಭಾರತವು ಪಾಕಿಸ್ತಾನ ಮತ್ತು ಚೀನಾದೊಂದಿಗೆ ಹೇಗೆ ಹೋರಾಡುತ್ತದೆ? ಎಂದು ವ್ಯಂಗ್ಯವಾಡಿದ್ದಾರೆ.
ಈ ಸಿನಿಮಾ ಮೂರು ಗಂಟೆಗಳ ಟಾಪ್ಕ್ಲಾಸ್ ಟಾರ್ಚರ್ ಸಿನಿಮಾ ಆಗಿದೆ. ಮೇಕಿಂಗ್ ಹೆಸರಿನಲ್ಲಿ ಹಣ ಮತ್ತು ಸಮಯವನ್ನು ವ್ಯರ್ಥ ಮಾಡಲಾಗಿದೆ. ಒಂದು ವೇಳೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದರೆ ಬಾಲಿವುಡ್ ಮುಗಿದಂತೆ. ಏಕೆಂದರೆ, ಬಾಲಿವುಡ್‌ನಲ್ಲಿ ಇಂತಹ ಸಿನಿಮಾ ಮಾಡಿದರೆ ಆ ಚಿತ್ರ ಅನಾಹುತವಾಗುವುದು ಖಚಿತ. ಈ ಚಿತ್ರಕ್ಕೆ ನನ್ನ ರೇಟಿಂಗ್ ಥೂ.. ಅಷ್ಟೇ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಕೊನೆಯಲ್ಲಿ ಯಶ್ ವಿರುದ್ಧ ಕಿಡಿಕಾರಿರುವ ಕಮಲ್ ಆರ್ ಖಾನ್, ಯಶ್ ಬ್ರೋ ಕೇವಲ ಒಂದೇ ಗಂಟೆಯಲ್ಲಿ ನೀವು ರಷ್ಯಾವನ್ನು ಸೋಲಿಸಬಹುದು. ನಿಮ್ಮ ಕನ್ನಡಕವನ್ನು ತೆಗೆಯದೇ ಯೂಕ್ರೇನ್ ಅನ್ನು ರಷ್ಯಾದಿಂದ ಕಾಪಾಡಬಹುದು. ಮೊದಲು ಅದನ್ನು ಮಾಡಿ ಲಕ್ಷಾಂತರ ಮಂದಿಯನ್ನು ಕಾಪಾಡಿ. ಈ ಸಿನಿಮಾ ಮಾಡಿದ ನಿಮಗೆ ನಾಚಿಕೆಯಾಗಬೇಕು. ಆ ಥೂ… ಈ ಸಿನಿಮಾಗೆ ಇದೇ ನನ್ನ ರೇಟಿಂಗ್ ಎಂದು ಟ್ವೀಟ್ ಮಾಡಿ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Laxmi News 24×7