ಬೆಂಗಳೂರು : ರಾಜ್ಯದಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಅನ್ನು ಸಚಿವ ಈಶ್ವರಪ್ಪ ಮಂಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಯಲ್ಲಿ ದುರ್ನಡೆಯಿಂದ ವಜಾಗೊಂಡು ಶಿಕ್ಷೆಗೊಳಗಾಗಿದ್ದ ನೌಕರ ಹಾಗೂ ಸಹಕಾರ ಸಂಘ ಮತ್ತು ಸಂಸ್ಥೆಗಳ ಅಧ್ಯಕ್ಷ, ಸದಸ್ಯತ್ವದಿಂದ ಯಾವುದೇ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಿ ತೆಗೆದುಹಾಕಿದ್ದಲ್ಲಿ ಅಂತಹ ವ್ಯಕ್ತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಿಲ್ಲುವುದರಿಂದ ಅನರ್ಹಗೊಳಿಸುವ ಅಂಶ ಸೇರಿಸಲಾಗಿದೆ. ಇದೊಂದು ಸಣ್ಣ ತಿದ್ದುಪಡಿ. ಹಾಗಾಗಿ, ಬಿಲ್ಗೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.
