ನವದೆಹಲಿ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 60 ಕಿ.ಮೀ ಮಿತಿಯಲ್ಲಿ ಒಂದು ಟೋಲ್ ಪ್ಲಾಜಾ ಕಾರ್ಯನಿರ್ವಹಿಸಲಿದೆ. ಹೆಚ್ಚುವರಿ ಇದ್ದಲ್ಲಿ ಮುಂದಿನ ಮೂರು ತಿಂಗಳಲ್ಲಿ ಅವುಗಳನ್ನು ತೆಗೆಯಲಾಗುವುದು’ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅವರು ಮಂಗಳವಾರ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದರು. ‘ಗರಿಷ್ಠ 8 ಪ್ರಯಾಣಿಕರು ಇರುವ ವಾಹನನಗಳಲ್ಲಿ ಸುರಕ್ಷತೆಗೆ ಒತ್ತುನೀಡಲು, ಅಂಥ ವಾಹನಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್ ಇರುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.
‘ವಿದ್ಯುತ್ ಚಾಲಿತ ವಾಹನಗಳ ದರ ಎರಡು ವರ್ಷದಲ್ಲಿ ಇಳಿಕೆ’: ತಂತ್ರಜ್ಞಾನದ ಪ್ರಗತಿಯಿಂದಾಗಿ ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ವೆಚ್ಚವು ತಗ್ಗಲಿದ್ದು, ಎರಡು ವರ್ಷದಲ್ಲಿ ಪೆಟ್ರೋಲ್ ಆಧರಿತ ವಾಹನಗಳಿಗೆ ಸಮನಾಗಿ ಇರಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ‘ಎರಡು ವರ್ಷದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್, ಕಾರು, ಆಟೊರಿಕ್ಷಾಗಳ ದರವು ಪೆಟ್ರೋಲ್ ಆಧರಿತ ವಾಹನಗಳಿಗೆ ಸರಿಸಮಾನವಾಗಿ ಇರಲಿದೆ. ಲಿಥಿಯಂ ಐಯಾನ್ ಬ್ಯಾಟರಿ ದರವೂ ಭವಿಷ್ಯದಲ್ಲಿ ಇಳಿಕೆಯಾಗಲಿದೆ’ ಎಂದು ತಿಳಿಸಿದರು.
ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ‘ಝಿಂಕ್ ಐಯಾನ್, ಅಲ್ಯುಮೀನಿಯಂ ಐಯಾನ್, ಸೋಡಿಯಂ ಐಯಾನ್ ಬ್ಯಾಟರಿಗಳ ಸಂಯೋಜನೆಯನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಪೆಟ್ರೋಲ್‌ಗೆ ನೀವು ₹ 100 ವ್ಯಯಿಸುತ್ತಿದ್ದಲ್ಲಿ, ವಿದ್ಯುತ್ ಚಾಲಿತ ವಾಹನ ಬಳಕೆಗೆ ₹ 10 ವ್ಯಯವಾಗಲಿದೆ’ ಎಂದರು. ಇದೇ ಸಂದರ್ಭದಲ್ಲಿ ಅವರು ‘ಆರ್ಥಿಕ ಮಿತವ್ಯಯಿಯಾದ ದೇಶಿ ಇಂಧನಕ್ಕೆ ನಾವು ಬದಲಾಗಬೇಕಿದೆ. ಶೀಘ್ರದಲ್ಲೇ ಇಂತಹ ಇಂಧನ ಸಾಕಾರವಾಗಲಿದೆ’ ಎಂದರು.
ಸಾರಿಗೆ ಉದ್ದೇಶಕ್ಕಾಗಿ ಹೈಡ್ರೋಜನ್ ಟೆಕ್ನಾಲಜಿ ಬಳಸಲು ಸಂಸದರು ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಪರಿಸರಸ್ನೇಹಿಯಾದ ಜಲಜನಕ ಉತ್ಪಾದನೆಗೆ ಕೊಳಚೆ ನೀರು ಸಂಸ್ಕರಿಸಲು ತಮ್ಮ ಕ್ಷೇತ್ರಗಳಲ್ಲಿ ಕ್ರಮವಹಿಸಬೇಕು ಎಂದೂ ಮನವಿ ಮಾಡಿದರು.