ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 11 ಜನರ ಸಜೀವ ದಹನಗೊಂಡಿರುವ ಘಟನೆ ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್ನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ.
ಹೈದರಾಬಾದ್: ಇಲ್ಲಿನ ಸಿಕಂದರಾಬಾದ್‌ನ ಬೋಯಗುಡದಲ್ಲಿರುವ ಟಿಂಬರ್ ಡಿಪೋದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, 11 ಜನರು ಸಜೀವ ದಹನವಾಗಿರುವ ದರ್ಘಟನೆ ಬೆಳಕಿಗೆ ಬಂದಿದೆ.
ಟಿಂಬರ್ ಡಿಪೋದಲ್ಲಿ ಭಾರೀ ಬೆಂಕಿ ಅವಘಡ
ಬೆಳ್ಳಂಬೆಳಗ್ಗೆ ಸಿಕಂದರಾಬಾದ್ನಲ್ಲಿ ಟಿಂಬರ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಿಗೆ ಮತ್ತು ಬಿದಿರುಗಳು ಇರುವುದರಿಂದ ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದೆ. ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾರಂಭಿಸಿತು. ಆದರೆ ಅಷ್ಟೊತ್ತಿಗಾಗಲೇ 11 ಜನರು ಸಜೀವ ದಹನಗೊಂಡಿದ್ದರು. ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.