ಅಷ್ಟಕ್ಕೂ, ಆ ಹುಡುಗ ಅಷ್ಟು ತುರ್ತಾಗಿ ಓಡುತ್ತಿದ್ದದ್ದಾರೂ ಎಲ್ಲಿಗೆ..? ಒಂದು ವೇಳೆ ಅಂತಹ ತುರ್ತು ಸ್ಥಿತಿ ಇದ್ದಿದ್ದರೆ ಡ್ರಾಪ್ ನಿರಾಕರಿಸಿದ್ದು ಏಕೆ..? ಹೀಗೆ ಹತ್ತು ಹಲವು ಪಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಅವೆಲ್ಲವಕ್ಕೂ ಉತ್ತರವನ್ನು ತಾನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಉತ್ತರ ನೀಡಿದ್ದಾರೆ ವಿನೋದ್ ಕಾಪ್ರಿ. ವಿಡಿಯೋವನ್ನು ಚಿತ್ರೀಕರಿಸುತ್ತಾ, ಓಡುತ್ತಿರುವ ಯುವಕನ್ನು ಮಾತನಾಡಿಸುತ್ತಲೇ ಅವನ ಈ ಓಟದ ಹಿಂದಿನ ಉದ್ದೇಶವನ್ನು ತಿಳಿದುಕೊಂಡಿದ್ದಾರೆ ಕಾಪ್ರಿ.
ಆ ಯುವಕನ ಹೆಸರು ಪ್ರದೀಪ್ ಮೆಹ್ರಾ. ವಯಸ್ಸಿನ್ನೂ 19 ವರ್ಷ. ಮೆಕ್‍ಡೊನಾಲ್ಡ್‌ನಲ್ಲಿ ಕೆಲಸ ಮಾಡುವ ಆ ಯುವಕ, ಶಿಫ್ಟ್ ಮುಗಿಸಿಕೊಂಡು ನಿತ್ಯವೂ ರಾತ್ರಿ 10 ಕಿ.ಮೀ ನಿರಂತರವಾಗಿ ಓಡುತ್ತಾನಂತೆ.
ಬೆಳಗ್ಗೆ 8 ಗಂಟೆಗೆ ಎದ್ದು, ಮನೆಯಲ್ಲಿ ಅಡುಗೆ ಮಾಡಿ, ಕೆಲಸಕ್ಕೆ ಹೋಗಲಿಕ್ಕಿರುವ ಕಾರಣ, ರಾತ್ರಿ ಕೆಲಸ ಮುಗಿಸಿಕೊಂಡು ಸಾರಿಗೆಯಲ್ಲಿ ಪ್ರಯಾಣಿಸುವ ಬದಲು, ಓಡಿಕೊಂಡೇ ಮನೆಗೆ ಹೋಗುತ್ತಾನೆ ಹುಡುಗ. ಯಾಕಂತೀರಾ? ಸೇನೆ ಸೇರಲು!10 ಕಿ.ಮೀ ದೂರ ಓಟ!
ಹೌದು, ಉತ್ತರಾಖಂಡ ಮೂಲದ ಈ ಯುವಕ, ನಿತ್ಯವೂ ತಾನು ಕೆಲಸ ಮಾಡುವ ನೋಯ್ಡಾದ ಸೆಕ್ಟರ್ 16 ನಿಂದ ಬರೋಲಾದಲ್ಲಿರುವ ತನ್ನ ಮನೆಗೆ 10 ಕಿ.ಮೀ ದೂರ ಓಡಿಕೊಂಡೇ ಹೋಗುತ್ತಾನೆ. ಅಲ್ಲಿ ಅವನು ತನ್ನ ಅಣ್ಣನ ಜೊತೆ ವಾಸಿಸುತ್ತಿದ್ದಾನೆ. ವಿನೋದ್ ಕಾಪ್ರಿಯವರು, ಆತನ ಹೆತ್ತವರ ಬಗ್ಗೆ ವಿಚಾರಿಸಿದಾಗ, ತನ್ನ ತಾಯಿ ಅನಾರೋಗ್ಯ ಪೀಡಿತಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆ ಯುವಕ ಉತ್ತರಿಸಿದ್ದಾನೆ.
ನಾನೇನು ಕೆಟ್ಟ ಕೆಲಸ ಮಾಡುತ್ತಿಲ್ಲವಲ್ಲ!
“ಈ ನಿನ್ನ ವಿಡಿಯೋ ವೈರಲ್ ಆಗುತ್ತದೆ” ಎಂದು ಕಾಪ್ರಿ ಅವರು ಯುವಕನಿಗೆ ಹೇಳಿದಾಗ, “ಯಾರು ನನ್ನನ್ನು ಗುರುತಿಸುತ್ತಾರೆ..?. ಇದು ಒಂದು ವೇಳೆ ವೈರಲ್ ಆದರೂ ಅಡ್ಡಿಯಿಲ್ಲ, ನಾನೇನು ಕೆಟ್ಟ ಕೆಲಸ ಮಾಡುತ್ತಿಲ್ಲವಲ್ಲ” ಎಂದು ಉತ್ತರಿಸುತ್ತಾನೆ ಆತ.
ಮನೆಗೆ ಹೋಗಿ ಅಡುಗೆ ಮಾಡಬೇಕು!
ಓಡಿಕೊಂಡು ಮನೆಗೆ ತಲುಪಿದ ಬಳಿಕ , ಆತ ರಾತ್ರಿಯ ಅಡುಗೆಯನ್ನು ಕೂಡ ಮಾಡಬೇಕು ಎಂಬುದನ್ನು ತಿಳಿದ , ವಿನೋದ್ ಕಾಪ್ರಿ ಅವನಿಗೆ ,”ನನ್ನ ಜೊತೆ ಊಟ ಮಾಡು ಬಾ” ಎಂದು ಆಹ್ವಾನವನ್ನು ನೀಡುತ್ತಾರೆ.
“ಬೇಡ, ಆಗ ನನ್ನ ಅಣ್ಣ ಉಪವಾಸ ಇರಬೇಕಾಗುತ್ತದೆ” ಎಂದು ಉತ್ತರಿಸುತ್ತಾನೆ. ಆ ಯುವಕನ ಅಣ್ಣನಿಗೆ ನೈಟ್ ಶಿಫ್ಟ್ ಇದ್ದು, ಆತನೂ ಕೂಡ ಆ ಸಮಯದಲ್ಲಿ ಅಡುಗೆ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುವುದು ಕಾಪ್ರಿಯವರಿಗೆ ತಿಳಿಯುತ್ತದೆ.
ದಯವಿಟ್ಟು ಡ್ರಾಪ್ ಮಾಡುವೆ ಬಾ..
” ಪ್ರದೀಪ್ ನೀನು ಅದ್ಭುತ” ಎಂದು ಆತನನ್ನು ಹೊಗಳುವ ವಿನೋದ್ ಕಾಪ್ರಿ, ” ದಯವಿಟ್ಟು ನಿನ್ನನ್ನು ಮನೆಗೆ ಡ್ರಾಪ್ ಮಾಡಲು ಬಿಡು” ಎಂದು ಕೊನೆಯದಾಗಿ ಆತನ ಮನ ಒಲಿಸಲು ಪ್ರಯತ್ನಿಸುತ್ತಾರೆ.
“ಇಲ್ಲ, ಇಲ್ಲ, ನಾನು ಹೀಗೆಯೇ ಹೋಗುವೆ, ಇಲ್ಲದಿದ್ದರೆ ನನ್ನ ಓಟ ಹಾಳಾಗುತ್ತದೆ. ಇದು ನನ್ನ ನಿತ್ಯದ ದಿನಚರಿ” ಎಂದು ಮುಗುಳ್ನಗುತ್ತಲೇ ನಯವಾಗಿ ಅವರ ಆಹ್ವಾನವನ್ನು ತಿರಸ್ಕರಿಸುತ್ತಾನೆ ಆ ಯುವಕ. ಯುವಕನಿಗೆ ಶುಭ ಹಾರೈಸಿ, ಆ ವಿಡಿಯೋವನ್ನು ಮುಗಿಸಿರುವ ವಿನೋದ್ ಕಾಪ್ರಿ, “ಪ್ರದೀಪನ ಕಥೆ ಲಕ್ಷಾಂತರ ಜನರಿಗೆ ಪ್ರೇರಣೆಯಾಗುತ್ತದೆ” ಎಂದು ವಿಡಿಯೋಗೆ ಅಡಿ ಬರಹವನ್ನು ಕೂಡ ನೀಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡ 12 ಗಂಟೆಯ ಒಳಗೆ, 3.8 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, 1,53,000 ಮೆಚ್ಚುಗೆಗಳನ್ನು ಗಳಿಸಿದೆ. ಯುವಕ ಪ್ರದೀಪನ ಅಚಲವಾದ ಸಂಕಲ್ಪಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.