ಬೆಂಗಳೂರು: ಕುಡಿದ ಮತ್ತಿನಲ್ಲಿ ಬೀದಿಯಲ್ಲಿ ಮಲಗಿದ್ದ ವೃದ್ಧನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಾರ್ಚ್ 15ರ ನಸುಕಿನ ಜಾವ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದೆ. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಕೊಲೆಯಾದವ. ಅಂದು ರಾತ್ರಿ ಬಾರ್ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ಹಿನ್ನೆಲೆಯಲ್ಲಿ ಕೃಷ್ಣಪ್ಪನನ್ನು ಸ್ಥಳೀಯರು ಅಂಗಡಿಯೊಂದರ ಮುಂದೆ ಮಲಗಿಸಿ ಹೋಗಿದ್ದರು.
ಕುಡಿದು ಮಲಗಿದ್ದ ಈ ಜಾಗಕ್ಕೆ ಸೈಕೋ ಮನಸ್ಥಿತಿಯ ವ್ಯಕ್ತಿ ಬಂದಿದ್ದಾನೆ. ಮಲಗಿದ್ದ ಕೃಷ್ಣಪ್ಪನ ತಲೆ ಮೇಲೆ ಹಾಲೋಬಾಕ್ಸ್ ಕಲ್ಲಿನಿಂದ ತಲೆಗೆ ಎರಡು ಬಾರಿ ಹೊಡೆದಿದ್ದಾನೆ. ನಂತರ ಕೃಷ್ಣಪ್ಪನ ಜೇಬಿಗೆ ಕೈ ಹಾಕಿದ್ದಾನೆ. ಆದ್ರೆ ಜೇಬಿನಲ್ಲಿ ಏನೂ ಸಿಗದ ಕಾರಣ ಅಲ್ಲಿಂದ ಕಾಲ್ಕಿತ್ತಿದ್ದಾನೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.