ಕರ್ನಾಟಕ ರತ್ನʼ ಡಾ. ಪುನೀತ್ ರಾಜ್ಕುಮಾರ್ ಜನ್ಮದಿನದ ಸಂಭ್ರಮ ಇಡೀ ರಾಜ್ಯಾದ್ಯಂತ ಮನೆ ಮಾಡಿದೆ. ಅಪ್ಪು ಜನ್ಮ ದಿನದ ಪ್ರಯುಕ್ತ ʼಜೇಮ್ಸ್ʼ ಸಿನಿಮಾ ಕೂಡ ರಿಲೀಸ್ ಆಗಿದ್ದು ಪುನೀತ್ ಅಭಿಮಾನಿಗಳು ಸಿನಿಮಾ ಮಂದಿರಗಳತ್ತ ಧಾವಿಸುತ್ತಿದ್ದಾರೆ.
ದೈಹಿಕವಾಗಿ ಪುನೀತ್ ನಮ್ಮೊಂದಿಗೆ ಇಲ್ಲದೇ ಇದ್ದರೂ ಸಹ ತಾವು ಬದುಕಿದ ರೀತಿಯ ಮೂಲಕ, ತಮ್ಮ ಪ್ರತಿಭೆಯ ಮೂಲಕ ಇನ್ನೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.
ʼಕರ್ನಾಟಕ ರತ್ನʼನ ಜನ್ಮದಿನದ ಪ್ರಯುಕ್ತ ಇಂದು ಇಡೀ ರಾಜ್ಯವೇ ಸಂಭ್ರಮದಲ್ಲಿದೆ. ವಾಟ್ಸಾಪ್ ಸ್ಟೇಟಸ್, ಇನ್ಸ್ಟಾಗ್ರಾಂ, ಟ್ವಿಟರ್ ಹೀಗೆ ಎಲ್ಲಾ ಕಡೆಗಳಲ್ಲಿ ಇಂದು ಅಪ್ಪು ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ನೆಚ್ಚಿನ ನಟ ಪುನೀತ್ ಜನ್ಮ ದಿನದ ಪ್ರಯುಕ್ತ ಪುಟ್ಟ ಬಾಲಕಿಯೊಬ್ಬಳು ವಿಶೇಷವಾಗಿ ಅಪ್ಪುವಿಗೆ ಶುಭಾಶಯ ಕೋರಿದ್ದಾಳೆ. ಬೆಂಗಳೂರಿನ ಗಿರಿನಗರ ನಿವಾಸಿ ಯತೀಶ್ ಕುಮಾರ್, ದಿಶಾ ಯತೀಶ್ ಕುಮಾರ್ ದಂಪತಿಯ ಪುತ್ರಿ ಆರೋಹಿ ಚೌಹಾಣ್ ತನ್ನ ಮುದ್ದು ಕಂಠದಲ್ಲಿ ʼಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದʼ ಎಂಬ ಹಾಡನ್ನು ಹಾಡುವ ಮೂಲಕ ಪುನೀತ್ಗೆ ವಿಶೇಷ ನಮನ ಸಲ್ಲಿಸಿದ್ದಾಳೆ.