ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ರಾಜ್ಯದ 400 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಥಿಯೇಟರಿಗೆ ಆಗಮಿಸಿ ಹಬ್ಬ ಮಾಡುತ್ತಿದ್ದಾರೆ.
ಅಪ್ಪು ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಅಪ್ಪು ಅಗಲಿದ ನೋವಿದ್ದರೂ, ಅವರ ಕೊನೆ ಸಿನಿಮಾ ಜೇಮ್ಸ್‍ನ್ನು ನೋಡುವ ಮೂಲಕ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಚಿತ್ರ ತೆರೆಕಂಡಿದೆ. ಥಿಯೇಟರ್ ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಕಟೌಟ್‍ಗಳನ್ನು ಹಾಕಿ ಜೇಮ್ಸ್ ಜಾತ್ರೆಯನ್ನು ಆಚರಣೆ ಮಾಡುತ್ತಿದ್ದಾರೆ.ಥಿಯೇಟರ್ ಮುಂಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಥಿಯೇಟರ್ ಸಿಬ್ಬಂದಿ, ಅಭಿಮಾನಿಗಳು ಥಿಯೇಟರ್‌ಗೆ ಬಾಳೆ ಕಂದು, ಮಾವಿನ ಸೊಪ್ಪು, ಹೂವಿನ ಹಾರವನ್ನು ಕಟ್ಟಿ ಅಲಂಕರಿಸಿದ್ದಾರೆ.