ಬೆಂಗಳೂರು :ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹಾಗೂ ಪೊಲೀಸ್ ನೇಮಕಾತಿಯಲ್ಲಿ ಕೇಳಿಬರುತ್ತಿದ್ದ ಅವ್ಯವಹಾರದ ಆರೋಪವೀಗ ಶಿಕ್ಷಣ ಇಲಾಖೆ ನೇಮಕಾತಿಗೂ ವ್ಯಾಪಿಸಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಡೀಲ್ ಶುರುವಾಗಿದೆ!
ತಲಾ ಹುದ್ದೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಡೀಲ್ ಒಪ್ಪಿಕೊಂಡು ಮುಂಗಡ ಹಣ ಕೊಟ್ಟವರಿಗೆ ಹುದ್ದೆ ಫಿಕ್ಸ್ ಭರವಸೆ ನೀಡಲಾಗುತ್ತಿದೆ. ಮಾ.12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. 33 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷೆ ದಿನಾಂಕ ಘೋಷಣೆಯಾಗುವ ಮೊದಲಿನಿಂದಲೂ ಡೀಲ್ ನಡೆಯುತ್ತಲೇ ಇದ್ದು, ಹತ್ತಿರ ಬಂದ ತಕ್ಷಣ ವ್ಯವಹಾರ ಜೋರಾಗಿದೆ. ಡೀಲ್ ಬಗ್ಗೆ ಬಹುತೇಕ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ 40 ರಿಂದ 50 ಲಕ್ಷ ರೂ.ಗೆ ನಿಗದಿಯಾಗಿದೆ ಎಂದು ಬರೆದುಕೊಳ್ಳುತ್ತಿರುವುದು ಅವ್ಯವಹಾರಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೇಲೂ ನಂಬಿಕೆ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪೇಮೆಂಟ್ ಪಾವತಿ ಹೇಗೆ?
ಮೊದಲಿಗೆ ಶೇ.30 ಹಣವನ್ನು ಮುಂಗಡವಾಗಿ ಪಡೆದು, ನಂತರ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಬಂದ ಮೇಲೆ ಉಳಿದ ಹಣವನ್ನು ಪಡೆಯುತ್ತಾರೆ. ಇಲ್ಲಿ ಎಲ್ಲಿಯೂ ಕ್ಯಾಶ್ ಹೊರತಾಗಿ ಬೇರೆ ಯಾವುದೇ ರೀತಿಯ ವ್ಯವಹಾರ ನಡೆಯುವುದಿಲ್ಲ.
ಡೀಲ್ಗೆ ಒಪ್ಪಿದರೆ ಕೆಲಸ ಪಕ್ಕಾ: ವೇತನ ಹೆಚ್ಚಿರುವುದರಿಂದ ಡೀಲ್ ಮೊತ್ತ ಕೂಡ ದೊಡ್ಡದಾಗಿ ಫಿಕ್ಸ್ ಮಾಡಲಾಗಿದೆ. ಕೆಲವು ಅಭ್ಯರ್ಥಿಗಳು ಏಜೆಂಟ್ಗಳನ್ನು ಸಂರ್ಪಸಿ ದ್ದಾರೆ. 40 ಲಕ್ಷ ರೂ. ನಿಗದಿಪಡಿಸಿದ್ದು, ಅಷ್ಟಕ್ಕೆ ಒಪ್ಪಿದರಷ್ಟೇ ನೇಮಕಾತಿ ಪಕ್ಕಾ ಎಂಬ ಭರವಸೆ ಕೊಡುತ್ತಿದ್ದಾರೆ. ಡೀಲ್ಗೆ ಒಪ್ಪಿ ಮುಂಗಡವಾಗಿ ಹಣ ನೀಡಿದರೆ, ಪರೀಕ್ಷೆ ಹಿಂದಿನ ದಿನವೇ ಅಭ್ಯರ್ಥಿಗಳ ಕೈಗೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಏಜೆಂಟ್ಗಳು ಭರವಸೆ ನೀಡುತ್ತಿರುವುದಾಗಿ ಕೆಲವು ಅಭ್ಯರ್ಥಿಗಳು ವಿಜಯವಾಣಿಗೆ ತಿಳಿಸಿದ್ದಾರೆ.
ಹೇಗೆ ನಡೆಯುತ್ತದೆ ಡೀಲ್?
ಪರೀಕ್ಷೆಯ 1 ದಿನ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಡೀಲರ್ ಪಡೆಯುತ್ತಾರೆ. ಪೇಮೆಂಟ್ ಮಾಡಿರುವ ಅಭ್ಯರ್ಥಿಗಳಿಗೆ ಕರೆ ಮಾಡಿ ಕಾರ್ನಲ್ಲಿ ನಿರ್ದಿಷ್ಟ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮೊಬೈಲ್ ಎಲ್ಲವನ್ನು ಕಸಿದುಕೊಂಡು ಪ್ರಶ್ನೆ ಪತ್ರಿಕೆ ತೋರಿಸಿ ಉತ್ತರವನ್ನೂ ನೀಡುತ್ತಾರೆ. ಚೆನ್ನಾಗಿ ಗಮನದಲ್ಲಿಟ್ಟುಕೊಂಡು ಮಾರನೇ ದಿನ ಪರೀಕ್ಷೆ ಬರೆಯಬೇಕಾಗಿರುತ್ತದೆ ಎಂಬುದಾಗಿ ಏಜೆಂಟ್ ಬಳಿ ಚರ್ಚೆ ಮಾಡಿರುವ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.