ಚಿತ್ರದುರ್ಗ: ಇವರಿಬ್ಬರು ಆತನನ್ನು ಒಂದು ವರ್ಷ ಕಾಲ ಸತಾಯಿಸಿದ್ದರು. ಆದರೆ ಇಂದು ಕೊನೆಗೂ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿಬಿದ್ದವರ ಹೆಸರು ಸುಷ್ಮಾರಾಣಿ ಮತ್ತು ಜಯಲಕ್ಷ್ಮಿ.
ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಗ್ರಾಮ ಪಂಚಾಯತಿ ಪಿಡಿಒ ಸುಷ್ಮಾರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಬಂಧಿತ ಆರೋಪಿಗಳು.
ಇವರು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುರೇಶ್ ಎಂಬ ವ್ಯಕ್ತಿಯ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದರು.
ಸುರೇಶ್ ಇ-ಸ್ವತ್ತು ಮಾಡಿಸಿಕೊಡುವಂತೆ ಬರುತ್ತಿದ್ದರೂ ಇವರಿಬ್ಬರೂ ಅವರನ್ನು ಲಂಚಕ್ಕಾಗಿ ಪೀಡಿಸಿದ್ದರು. ಹೀಗೆ ಒಂದೆರಡು ದಿನವಲ್ಲ, ಕಳೆದ ಒಂದು ವರ್ಷದಿಂದ ಇ-ಸ್ವತ್ತು ಮಾಡಿಕೊಡದೇ ಸತಾಯಿಸಿದ್ದರು. ಕೊನೆಗೂ ಬೇಸತ್ತ ಸುರೇಶ್ ಎಸಿಬಿಗೆ ದೂರು ನೀಡಿದ್ದರು.
ಇಂದು ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ಸಿಪಿಐ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರು ಸಾವಿರ ರೂ. ಲಂಚ ಸ್ವೀಕರಿಸುವಾಗ ಇವರಿಬ್ಬರನ್ನು ಹಿಡಿದಿದ್ದಾರೆ.
Laxmi News 24×7