ಪಾಶ್ಚಾಪೂರ: ‘ಜೀವನದಲ್ಲಿ ಎಲ್ಲವನ್ನ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆದ ಕಾರಣ ಪ್ರಯತ್ನ ನಿಮ್ಮದಾದರೆ, ಪ್ರೋತ್ಸಾಹ ನಮ್ಮದಾಗಲಿದೆ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಹಾಯ ಸಂಘಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
‘ಕಳೆದ ತಿಂಗಳೇ ಸಂಘಗಳ ಉದ್ಘಾಟನೆ ನಡೆಯಬೇಕಿತ್ತು. ಆದರೆ ಹಲವು ಕಾರಣಗಳಿಂದ ವಿಳಂಬವಾಯಿತು. ಆದರೂ ಸಹ ವ್ಯವಸ್ಥಿತವಾಗಿ ಕಾರ್ಯಕ್ರಮ ನೆರೆವೇರಿದೆ’ ಎಂದು ಹೇಳಿದರು.
‘ಸಂಘಟನೆಯಲ್ಲಿ ಹೋರಾಟ, ತೊಂದರೆಗಳು ಸಾಮಾನ್ಯ ಆದರೆ ಅವುಗಳೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ’ ಎಂದರು.
‘ಯಮಕನಮರಡಿ ಕ್ಷೇತ್ರದಲ್ಲಿ 12 ವರ್ಷಗಳಿಂದ ಶಿಕ್ಷಣ, ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜತೆಗೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳು ಸದ್ಭಳಕೆಯಾಗುತ್ತಿಲ್ಲ ‘ ಎಂದು ಕಳವಳ ವ್ಯಕ್ತ ಪಡಿಸಿದರು.
‘ಸಮುದಾಯ ಭವನ ಸದ್ಭಳಕೆಯಾಗದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಷನ್ ವತಿಯಿಂದ ಸೌಂಡ್ ಸಿಸ್ಟಮ್, ಚೇರ್ ಗಳನ್ನು ನೀಡಲಾಗುತ್ತಿದೆ. ಈಗಾಗಲೇ 1 ಸಾವಿರ ಚೇರ್ ಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.
‘ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಸಂಘಗಳು ಉತ್ತಮ ಕಾರ್ಯಗಳನ್ನು ಕೈಗೊಳ್ಳಿ’ ಎಂದು ಶುಭಕೋರಿದರು