ಬೆಂಗಳೂರು : ಶಿವಮೊಗ್ಗ ಘಟನೆ ಮತ್ತು ಹಿಜಬ್ ಪ್ರಕರಣದ ವಿಚಾರಕ್ಕೆ ಕೂಡಲೇ ರಾಜ್ಯಪಾಲ ಮಧ್ಯೆ ಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ವಿಕೃತ ಕೇಕೆ ಹಾಕುತ್ತಿವೆ ಆಕ್ರೋಶ ಹೊರಹಾಕಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾದ್ಯಂತ ರಾಜಕೀಯ ಕೊರೊನಾವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಕಿವಿಮಾತು ಹೇಳಿದ್ದಾರೆ.ಅಧಿಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ನಾನು ಹೊಡೆದಂಗೆ ಮಾಡುತ್ತೇನೆ. ನೀನು ಅತ್ತಂಗೆ ಮಾಡು ಎನ್ನುವಂತೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ಕಲಾಪಕ್ಕೆ ಕುಣಿಕೆ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು.ನಿಗದಿತ ವೇಳಾಪಟ್ಟಿಗಿಂತ 3 ದಿನ ಮೊದಲೇ ಮುಗಿದ ಅಧಿವೇಶನದಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಸೊನ್ನೆ ಸುತ್ತಲಾಗಿದೆ. ಜನಪ್ರತಿನಿಧಿಗಳ ಕೇವಲ ಟಿಎ-ಡಿಎಗಾಗಿ ಮತ್ತು ವೇತನ, ಭತ್ಯೆ ಏರಿಸಿಕೊಳ್ಳಲಷ್ಟೇ ಅಧಿವೇಶನ ನಡೆದಿದೆ. ಜನರು ಏನೆಂದುಕೊಂಡಾರು? ಎಂಬ ಕನಿಷ್ಠ ಭಯವೂ ಇಲ್ಲದ ಆತ್ಮವಂಚನೆಯ ಪರಾಕಾಷ್ಠೆ ಇದು ಎಂದು ಆಕ್ರೋಶ ಹೊರ ಹಾಕಿದ್ದಾರೆ.