ಚಿಕ್ಕೋಡಿ: ಕಂಠ ಪೂರ್ತಿ ಕುಡಿದು ಬಂದ ಗಂಡನಿಂದಲೇ ಪತ್ನಿಯ ಕೊಲೆ(Murder) ಆಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ. ಆತ ಎಂದಿನಂತೆ ಕಂಠ ಪೂರ್ತಿ ಎಣ್ಣೆ ಕುಡಿದು ಮನೆಗೆ ಬಂದಿದ್ದ ಕುಡಿದು ಬಂದು ತಾನಾಯ್ತು ತನ್ನ ನಶೆ ಗುಂಗಾಯ್ತು ಅಂತ ಸುಮ್ಮನೆ ಮಲಗಿದ್ರೆ ಆ ಸಂಸಾರದಲ್ಲಿ ಬೆಳಗ್ಗೆ ಎಲ್ಲವೂ ಸರಿಯಾಗಿಯೇ ಇರ್ತಿತ್ತು. ಆದ್ರೆ ನಶೆಮಾಡಿದ ತಪ್ಪಿಗೆ ಒಂದು ಜೀವವೇ ಬಲಿಯಾಗಿದೆ. ಪ್ರತಾಪ್ ಅಲಿಯಾಸ್ ಪ್ರದೀಪ್ ಕಾಂಬಳೆ ಹೆಂಡತಿಯನ್ನು ಕೊಂದ ಆರೋಪಿ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ನಿವಾಸಿ ಪ್ರದೀಪ್, 15 ವರ್ಷದ ಹಿಂದೆ ಆಶಾ ಎಂಬುವವಳನ್ನು ಮದುವೆಯಾಗಿ ಸುಂದರ ಸಂಸಾರ ನಡೆಸಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ರು ಮಕ್ಕಳು ಇದ್ದಾರೆ. ಒಬ್ರೆ ದುಡಿದ್ರೆ ಜೀವನ ಮಾಡೋಕಾಗಲ್ಲ ಅಂತ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಿದ್ರಂತೆ. ಆದ್ರೆ ಕುಡಿತಕ್ಕೆ ದಾಸನಾಗಿದ್ದ ಪ್ರದೀಪ್ ಇತ್ತೀಚೆಗೆ ಹೆಂಡತಿ ಮೇಲೆ ಯಾವಾಗ್ಲೂ ಅನುಮಾನ ಪಡ್ತಿದ್ನಂತೆ. ಇದೇ ತಿಂಗಳ 24ರಂದು ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ನಶೆಯಲ್ಲಿದ್ದ ಪ್ರದೀಪ್ ಸೀರೆಯಿಂದ ಆಶಾ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ.
ಇನ್ನು ಮದುವೆಯಾದಾಗಿನಿಂದಲೂ ಜೊತೆಗಿದ್ದ ಆಶಾ ಗಂಡನ ಹಿಂಸೆಗೆ ಬೇಸತ್ತು ಐದು ವರ್ಷದಿಂದ ದೂರವಾಗಿದ್ಳಂತೆ. ಒಂದು ವರ್ಷದ ಹಿಂದೆ ಪ್ರದೀಪನೇ ಹುಡುಕಿ ಕರೆದುಕೊಂಡು ಬಂದಿದ್ನಂತೆ. ಒಟ್ಟಿನಲ್ಲಿ ಅನುಮಾನ ಹಾಗೂ ಕುಡಿತದ ಚಟದಿಂದ ಒಂದು ಸಂಸಾರವೇ ಹಾಳಾಗಿದೆ. ತಾಯಿ ಸಾವನ್ನಪ್ಪಿದ್ರೆ, ತಂದೆ ಜೈಲು ಸೇರಿದ್ದಾನೆ. ಮಾಡದ ತಪ್ಪಿಗೆ ಮಕ್ಕಳು ಅನಾಥರಾಗಿದ್ದಾರೆ.