ಬೆಂಗಳೂರು: ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 2004ರಿಂದಲೂ ಸಮವಸ್ತ್ರವಿದ್ದು, ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಏಕಾಏಕಿ ಉದ್ಭವಿಸಿದೆ. ಇದಕ್ಕೆಲ್ಲ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಎಂಬ ಸಂಘಟನೆಯೇ ಕಾರಣ ಎಂದು ಹಿರಿಯ ವಕೀಲ ಎಸ್.ಎಸ್.
ನಾಗಾನಂದ್ ಹೈಕೋರ್ಟ್ಗೆ ತಿಳಿಸಿದರು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠದಲ್ಲಿ ಬುಧವಾರವೂ ಮುಂದುವರಿಯಿತು.
ಉಡುಪಿ ಪದವಿ ಪೂರ್ವ ಕಾಲೇಜಿನ ಪರ ವಾದ ಮಂಡಿಸಿದ ನಾಗಾನಂದ್, 2021ರ ಡಿ.30ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಎಂಬ ಸಂಘಟನೆ ಕಾಲೇಜು ಅಧಿಕಾರಿಗಳನ್ನು ಭೇಟಿ ಮಾಡಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿತ್ತು. ಇದಕ್ಕೆ ನಿರಾಕರಿಸಿದಾಗ ಇಷ್ಟೆಲ್ಲ ಗದ್ದಲಗಳು ಸೃಷ್ಟಿಯಾಗಿವೆ. ಕಾಲೇಜಿಗೆ ಸಂಬಂಧವೇ ಪಡದ ಸಂಘಟನೆಯೊಂದು ಇಷ್ಟೆಲ್ಲ ಗದ್ದಲಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಕೋರ್ಟ್ಗೆ ಸಿಎಫ್ಐ ಅಚ್ಚರಿ!: ಸಿಎಫ್ಐ ಎಂದರೇನು ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ನಾಗಾನಂದ್, ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಹಿಜಾಬ್ನ ಪರವಾಗಿರುವ ವಾದವನ್ನು ಮುನ್ನಡೆಸುತ್ತಿದೆ. ಈ ಸಂಘಟನೆ ಯಾವುದೇ ಯೂನಿಯನ್ ಮಾನ್ಯತೆ ಪಡೆದಿಲ್ಲ ಎಂದರು. ಈ ಸಂಘಟನೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂದು ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕುತ್ತರಿಸಿದ ಎಜಿ, ಸರ್ಕಾರದ ಬಳಿ ಕೆಲ ಮಾಹಿತಿ ಇದೆ. ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಆಗ ನ್ಯಾಯಪೀಠ, ಇದ್ದಕ್ಕಿದ್ದಂತೆ ಈ ಸಂಘಟನೆ ಎಲ್ಲಿಂದ ಉದ್ಭವಿಸಿತು ಎಂದು ಅಚ್ಚರಿ ವ್ಯಕ್ತಪಡಿಸಿತು. ಅರ್ಜಿದಾರರೊಬ್ಬರ ಪರ ವಕೀಲರು, ಈ ಪ್ರಕರಣದಲ್ಲಿ ಕೇಸರಿ ಶಾಲುಗಳನ್ನು ಹಂಚಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ಸಂಘಟನೆ ಬಗ್ಗೆ ವರದಿ ಕೇಳಿದರೆ, ಮತ್ತೊಂದು ಸಂಘಟನೆಯ ಬಗ್ಗೆಯೂ ಕೇಳಬೇಕಾಗುತ್ತದೆ ಎಂದರು. ಅದನ್ನು ಪರಿಶೀಲಿಸುವುದಾಗಿ ಸಿಜೆ ಹೇಳಿದರು.