ಕೇರಳ: ಕರ್ನಾಟಕದ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣ ತಲ್ಲಣ ಸೃಷ್ಟಿಸಿರುವ ನಡುವೆ, ಅತ್ತ ಕೇರಳದಲ್ಲಿ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ.
ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿ ಎಂಬಲ್ಲಿ ಈ ಘಟನೆ ನಡೆದಿದೆ.
ವೃತ್ತಿಯಲ್ಲಿ ಮೀನುಗಾರ ಆಗಿದ್ದ ತಲಶೇರಿ ಪುನ್ನೊಳ್ ನಿವಾಸಿ ಹರಿದಾಸ್ ಕೊಲೆಯಾದ ವ್ಯಕ್ತಿ. ಹರಿದಾಸ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ರಾತ್ರಿ ಸುಮಾರು 1:30 ಗಂಟೆಯ ಸುಮಾರಿಗೆ ಕೊಲೆ ಮಾಡಲಾಗಿದೆ. ಮೂಲಗಳ ಪ್ರಕಾರ, ಎರಡು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಹರಿದಾಸ್ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ ಹರಿದಾಸ್ ಅನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹರಿದಾಸ್ ಅನ್ನು ಆರೆಸ್ಸೆಸ್ ನವರು ಕೊಲೆ ಮಾಡಿದ್ದಾರೆ ಎಂದು ಸಿಪಿಐಎಂ ಪಕ್ಷ ಆರೋಪಿಸಿದೆ. ಒಂದು ವಾರದ ಹಿಂದೆ ದೇವಸ್ಥಾನದ ಜಾತ್ರೆ ಸಂಬಂಧ ನಡೆದ ಗಲಾಟೆಯ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ.