ವಿಜಯಪುರ: ಎರಡು ಮಕ್ಕಳ ತಂದೆಯೋರ್ವ ಕೆಲಸ ಕೊಟ್ಟ ಮಾಲೀಕನ ಮಗಳನ್ನೇ ಎರಡನೇ ಮದುವೆಯಾಗಿ ಪೊಲೀಸರ ರಕ್ಷಣೆ ಕೋರಿದ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಜಾಲಗೇರಿ ಗ್ರಾಮದ ಸೋಮಲಿಂಗ ಎಂಬಾತ ಮಾಲೀಕನ ಮಗಳು ಅಕ್ಷತಾಳನ್ನು ಮದುವೆಯಾಗಿದ್ದಾನೆ.
ವೃತ್ತಿಯಲ್ಲಿ ಚಾಲಕನಾಗಿರುವ ಸೋಮಲಿಂಗ, ಅಕ್ಷತಾಳ ಮನೆಯ ಕಾರು ಚಾಲಕನಾಗಿದ್ದ. ಮನೆಯವರು ಪ್ರತಿದಿನ ಅಕ್ಷತಾಳನ್ನು ಕಾಲೇಜಿಗೆ ಬಿಟ್ಟು ಬರುವಂತೆ ಸೋಮಲಿಂಗನಿಗೆ ಬೈಕ್ ಕೊಟ್ಟು ಕಲಿಸುತ್ತಿದ್ದರು. ಕಾಲೇಜಿಗೆ ಡ್ರಾಪ್ ಮಾಡುವ ಗ್ಯಾಪ್ ಅಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ತನನ್ನು ಮದುವೆಯಾಗುವಂತೆ ಅಕ್ಷತಾ ಸೋಮಲಿಂಗಗೆ ಹೇಳಿದ್ದಾಳೆ. ಆದರೆ, ಈಗಾಗಲೇ ಮದುವೆಯಾಗಿ ಮಕ್ಕಳಿರುವುದರಿಂದ ಮದುವೆ ಬೇಡ ಎಂದು ಸೋಮಲಿಂಗ ಆರಂಭದಲ್ಲಿ ಹಿಂಜರಿದಿದ್ದ. ನಂತರ ನನಗೆ ನೀನೆ ಬೇಕು ಎಂದು ಅಕ್ಷತಾ ಪಟ್ಟು ಹಿಡಿದಾಗ ಸೋಮಲಿಂಗ ಆಕೆಯನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ.
ಅಕ್ಷತಾಳಿಗೂ ಸೋಮಲಿಂಗಗೆ ಈಗಾಗಲೇ ಮದುವೆಯಾಗಿರುವ ವಿಚಾರ ಗೊತ್ತಿತ್ತು. ಮದುವೆಯ ಬಳಿಕ ಗೋವಾಕ್ಕೆ ಹೋಗಿ ಸುತ್ತಾಡಿ ಬಂದಿರುವ ಜೋಡಿ, ನೇರವಾಗಿ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ರಕ್ಷಣೆ ಕೋರಿದ್ದಾರೆ. ತನಗೆ ಅಕ್ಷತಾ ಕುಟುಂಬಸ್ಥರಿಂದ ಬೆದರಿಕೆ ಇದೆ ಎಂದು ಸೋಮಲಿಂಗ ಹೇಳಿದ್ದಾನೆ.
ಆದರೆ, ಮೊದಲನೇ ಪತ್ನಿಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾಗಿರುವ ಸೋಮಲಿಂಗನ ವಿರುದ್ಧವೇ ಪೊಲೀಸರು ಕ್ರಮ ಜರುಗಿಸುವ ಸಾಧ್ಯತೆ ಇದೆ. ಈ ನಡುವೆ ನಾನು ಮೊದಲನೇ ಹೆಂಡತಿಯ ಮನವೊಲಿಸುತ್ತೇನೆ, ಇಬ್ಬರು ಜೊತೆಗಿರಲಿ ಎಂದು ಸೋಮಲಿಂಗ ಹೇಳುತ್ತಿದ್ದಾನೆ ಎಂದು ಹೇಳಲಾಗ್ತಿದೆ.