ರಾಷ್ಟ್ರಧ್ವಜ ವಿಚಾರವಾಗಿ ಸಚಿವ ಈಶ್ವರಪ್ಪ ಖಂಡನೀಯ ಹೇಳಿಕೆ ನೀಡಿದ್ದು, ರಾಜ್ಯಪಾಲರು ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕೇಂದ್ರದ ಯಾವುದೇ ಸಚಿವರು ಅವರ ವಜಾಕ್ಕೆ ಸಲಹೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತ್ರಿವರ್ಣ ಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸುವುದು ಹೆಮ್ಮೆ ಎಂದು ಅವರು ಭಾವಿಸಿದ್ದಾರೆ. ನಾವು ಈ ವಿಚಾರವಾಗಿ ಹೋರಾಟ ನಡೆಸುವಾಗ ಶಿವಮೊಗ್ಗದಲ್ಲಿ ವೈಯುಕ್ತಕ ವಿಚಾರವಾಗಿ ಕೊಲೆ ನಡೆದಿದೆ. ಈ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಚಾರದಲ್ಲಿ ರಾಜಕೀಯ ಹೇಳಿಕೆಯನ್ನು ನಾನು ನೀಡುವುದಿಲ್ಲ. ಈಶ್ವರಪ್ಪ ನನ್ನ ವಿರುದ್ಧ ಹೇಳಿಕೆ ನೀಡುತ್ತಿರಬಹುದು. ನನ್ನ ವಿರುದ್ಧ ಮಾತನಾಡದಿದ್ದರೆ ಅವರ ಪಕ್ಷದಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದು ಅರಿತು ಈ ರೀತಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮೊದಲು ಅವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು. ಅವರನ್ನು ವಜಾ ಮಾಡಿದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದರು.
ಈ ಸರ್ಕಾರ ಈಶ್ವರಪ್ಪ ಅವರನ್ನು ಎಷ್ಟು ದಿನಗಳ ಕಾಲ ರಕ್ಷಣೆ ಮಾಡಿಕೊಂಡು ಇರುತ್ತದೆಯೋ ಅಲ್ಲಿಯವರೆಗೂ ದೇಶದಲ್ಲಿ ಈ ಪರಿಸ್ಥಿತಿ ಮುಂದುವರಿಯಲಿದೆ. ವೈಯಕ್ತಿಕ ಗಲಾಟೆಗಳಿಂದ ಶಿವಮೊಗ್ಗದಲ್ಲಿ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ಮಾಹಿತಿ ನೀಡುತ್ತಿದ್ದು, ಇಂತಹ ಕೃತ್ಯ ನಡೆಯಬಾರದು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಈ ತಪ್ಪು ಯಾರೇ ಮಾಡಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.