ಮೊಗಾ: ಬಾಲಿವುಡ್ ನಟ ಸೋನು ಸೂದ್ ಅವರು ಪಂಜಾಬ್ ನ ಮೊಗಾ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಪ್ರವೇಶಕ್ಕೆ ಯತ್ನಿಸಿದ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ ಮತ್ತು ಮನೆಗೆ ವಾಪಸ್ ಕಳುಹಿಸಿದ ಘಟನೆ ಭಾನುವಾರ ನಡೆಯುತ್ತಿದೆ.
ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಮೊಗಾದಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಹೋದರಿ ಮಾಳವಿಕಾ ಅವರ ಪರವಾಗಿ ಕೆಲಸ ಮಾಡುತ್ತಿರುವ ಸೋನು ಸೂದ್ ಅವರು ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ್ದಾರೆ.
ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಗಾ ಜಿಲ್ಲೆಯ ಪಿಆರ್ ಓ ಪ್ರದ್ಭದೀಪ್ ಸಿಂಗ್ ಪ್ರಕಾರ, “ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಮನೆಗೆ ವಾಪಸ್ ಕಳುಹಿಸಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
”ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‌ಗಳಲ್ಲಿ ಬೆದರಿಕೆ ಕರೆಗಳ ಬಗ್ಗೆ ತಮಗೆ ತಿಳಿದಿದೆ ಎಂದು ನಟ ಆರೋಪಿಸಿದ್ದಾರೆ. ಕೆಲವು ಬೂತ್‌ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು. ಈಗ ನಾವು ಮನೆಯಲ್ಲಿದ್ದೇವೆ. ನ್ಯಾಯಯುತ ಚುನಾವಣೆ ನಡೆಯಬೇಕು” ಎಂದು ಸೋನು ಸೂದ್ ಹೇಳಿದ್ದಾರೆ.