ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದಲ್ಲಿ 15 ದಿನಗಳಿಂದ ಕಾಡು ಹಂದಿ ಕಾಟ ಹೆಚ್ಚಿದ್ದು, ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಬೆನವಳ್ಳಿ ಗ್ರಾಮದ ಕೃಷಿಕರಾದ ನಾಗಾರ್ಜುನಪ್ಪ ಗೌಡ (125), ರವೀಂದ್ರ ಗೌಡ (113), ಬಿ.ಎಲ್.
ಲಿಂಗಪ್ಪಗೌಡ (63), ರಾಚಪ್ಪ ಗೌಡ (103), ಸುರೇಶ್ ಗೌಡ (418), ಶಾಂತಕುಮಾರ್ ಗೌಡ (400), ಶಿವಮ್ಮ 220, ಕುಸುಮಮ್ಮ (100) ಸೇರಿ ಇನ್ನೂ ಹಲವರ ಸಾವಿರಾರು ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳು ನೆಲಸಮವಾಗಿವೆ.
ಆಹಾರಕ್ಕಾಗಿ ರಾತ್ರಿ ವೇಳೆ ಹಿಂಡು ಹಿಂಡಾಗಿ ಬಂದು ದಾಂಗುಡಿ ಇಡುವ ಕಾಡು ಹಂದಿಗಳು, 4-5 ವರ್ಷಗಳ ಅಡಿಕೆ ಮರಗಳ ಕಾಂಡಕೊರೆದು ಸಂಪೂರ್ಣ ನೆಲಸಮ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷಿಕ ನಾಗಾರ್ಜುನಪ್ಪ ಗೌಡ ದೂರಿದ್ದಾರೆ.
ಮೂರು ವರ್ಷಗಳಿಂದ ಕೊರೊನಾ ಹಾಗೂ ಹವಾಮಾನ ವೈಪರೀತ್ಯದಿಂದ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇಲ್ಲದೆ ಸಂಕಷ್ಟದಲ್ಲಿರುವ ಕಾಲಘಟ್ಟದಲ್ಲಿ ಕಾಡು ಹಂದಿಗಳ ಹಾವಳಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.