ನವದೆಹಲಿ: ರಾಷ್ಟ್ರ ರಾಜಧಾನಿಯ ನಾಗರಿಕರಿಗೆ ಟೆಕ್ನೋ ಫ್ರೆಂಡ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುವ ಸಲುವಾಗಿ ದೆಹಲಿ ಪೊಲೀಸರು ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಅನ್ನು ಪರಿಚಯಿಸಿದ್ದಾರೆ. ಈ ಮೂಲಕ ದೇಶದಲ್ಲೇ ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಅನ್ನು ಪರಿಚಯಿಸಿದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಬುಧವಾರ ದೆಹಲಿ ಪೊಲೀಸರ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮಾರ್ಟ್ ಕಾರ್ಡ್ ಹಾಗೂ ಶಾಸ್ತ್ರ ಅಪ್ಲಿಕೇಶನ್ ಅನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದ್ದಾರೆ.
ದೆಹಲಿ ಪೊಲೀಸ್ ಪರವಾನಗಿ ಘಟಕ ಸದ್ಯ ಚಾಲ್ತಿಯಲ್ಲಿರುವ ಬೃಹತ್ ಶಸ್ತ್ರಾಸ್ತ್ರ ಪರವಾನಗಿ ಬುಕ್‌ಲೆಟ್ ಅನ್ನು ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ನೊಂದಿಗೆ ಬದಲಾಯಿಸಲು ನಿರ್ಧರಿಸಿದೆ.
ಸ್ಮಾರ್ಟ್ ಕಾರ್ಡ್ ಅನ್ನು ಸಾಗಿಸಲು ಹಾಗೂ ನಿರ್ವಹಿಸಲು ಸುಲಭವಾಗಿದೆ. ಇದರೊಂದಿಗೆ ಸ್ಮಾರ್ಟ್ ಕಾರ್ಡ್ ಅಂತರ್ಗತ ಭದ್ರತಾ ವೈಶಿಷ್ಟ್ಯಗಳನ್ನೂ ಹೊಂದಿದೆ. ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ಡೇಟಾವನ್ನು ಪರಿಶೀಲಿಸಿದ ಬಳಿಕ ಅದನ್ನು ಮನೆಯಲ್ಲಿಯೇ ಕುಳಿತು ಮುದ್ರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.