ಬೆಂಗಳೂರು: ‘ಕಾವೇರಿ ನೀರು, 110 ಹಳ್ಳಿಗಳ ಅಭಿವೃದ್ದಿ, ಎತ್ತಿನಹೊಳೆ ಯೋಜನೆ, ಉದ್ಯಾನಗಳ ಅಭಿವೃದ್ದಿ, ಒಳಚರಂಡಿ, ಮೇಲ್ಸೇತುವೆಗಳು ಸೇರಿದಂತೆ ಅಭಿವೃದ್ದಿ ಕೆಲಸಗಳು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯವಾಗಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಿಜೆಪಿಯಿಂದ ಯಾವುದೇ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ. ಭ್ರಷ್ಟಾಚಾರ, ದಬ್ಬಾಳಿಕೆ, ಅಕ್ರಮ, ಅನ್ಯಾಯ, ಅಭಿವೃದ್ದಿ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರುವುದೇ ಇವರ ಸಾಧನೆ’ ಎಂದರು.
‘ಪ್ರಪಂಚದಲ್ಲೇ ಅತಿ ಹೆಚ್ಚು ಸುಳ್ಳು ಹೇಳುವ, ಜನರಿಗೆ ಮಂಕುಬೂದಿ ಎರಚುವ ವ್ಯಕ್ತಿ ಎಂದರೆ ಪ್ರಧಾನಿ ಮೋದಿ. ಅವರಿಗೆ ವಿಶ್ವಮಟ್ಟದ ಪ್ರಶಸ್ತಿ ನೀಡಬೇಕಾಗಿದೆ’ ಎಂದು ವ್ಯಂಗ್ಯವಾಡಿದರು.
ಸಂಸದ ಡಿ.ಕೆ.ಸುರೇಶ್, ‘ಕಾಂಗ್ರೆಸ್‌ನಲ್ಲಿ ಹೊಸಬರು ಮತ್ತು ಹಳಬರು ಎಂಬ ಪ್ರಶ್ನೆಯಿಲ್ಲ. ಕಾಂಗ್ರೆಸ್ ಪಕ್ಷ ದೇವಸ್ಥಾನವಿದ್ದಂತೆ. ಇಲ್ಲಿ ಎಲ್ಲರೂ ಒಂದೇ, ಪ್ರಾಮಾಣಿಕತೆಯಿಂದ ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರೇ ಪಕ್ಷದ ಆಸ್ತಿ’ ಎಂದರು.
ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ‘ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸವಾಗಿಲ್ಲ. ಇಲ್ಲಿನ ನಾಯಕರು ಕಳಪೆ ಕಾಮಗಾರಿ ನಡೆಸಿ, ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ದೂರಿದರು.
ಬಿಜೆಪಿ ನಾಯಕ ಬಿ.ಬೈರಪ್ಪ, ಬಿ.ದೇವರಾಜ್, ಈಶ್ವರ್, ಭಾಗ್ಯಮ್ಮ, ಬಾಲಕೃಷ್ಣ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
Laxmi News 24×7