ಇಳಕಲ್ (ಬಾಗಲಕೋಟೆ ಜಿಲ್ಲೆ): ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಉಸ್ಮಾನ್ ಘನಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಇತ್ತೀಚೆಗೆ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು. ನಂತರ ಉಸ್ಮಾನ ವಿರುದ್ಧ ಇಳಕಲ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ನಗರದ ಅಜಾದ್ ಸರ್ಕಲ್ ಹತ್ತಿರದ ಪೊಲೀಸ್ ಮೈದಾನದಿಂದ ಆರಂಭವಾದ ಮೆರವಣಿಗೆ ತರಕಾರಿ ಮಾರುಕಟ್ಟೆ, ಮುಖ್ಯ ಬಜಾರ್, ಗಾಂಧಿ ಚೌಕ ಮಾರ್ಗವಾಗಿ ಕಂಠಿ ವೃತ್ತದವರೆಗೆ ಸಾಗಿದೆ.
ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇಳಕಲ್‌ಗೆ ಬಂದಿದ್ದು, ಇಡೀ ನಗರ ಕೇಸರಿಮಯವಾಗಿದೆ. ಕೋವಿಡ್ ಸುರಕ್ಷತಾ ನಿಯಮಾವಳಿ ಗಾಳಿಗೆ ತೂರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ 600 ಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ.