ಬೆಂಗಳೂರು: ನೂತನ ಕಾರ್ಯಕಾರಿ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಸಿದ ಸ್ಪರ್ಧಾಳು ಸತತವಾಗಿ ಠೇವಣಿ ಕಳೆದು ಕೊಂಡರೆ ಮುಂದೆ ಸ್ಪರ್ಧೆಗೆ ಅರ್ಹತೆ ಕಳೆದುಕೊಳ್ಳುವಂತೆ ಬೈಲಾಕ್ಕೆ ತಿದ್ದುಪಡಿ ತರಲೂ ಚಿಂತಿಸಲಾಗಿದೆ.
ಈ ಸಂಬಂಧ ಪರಿಷತ್ತಿನ ಹಾಲಿ ಕಾರ್ಯಕಾರಿ ಸಮಿತಿ ಈಗಾಗಲೇ ನುರಿತ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಿರತವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಚುನಾವಣೆಗೆ ಸ್ಪರ್ಧಿಸುವವರಿಗೆ ಠೇವಣಿ ಮೊತ್ತವೂ ಕಡಿಮೆ. ಠೇವಣಿ ಮೊತ್ತ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಎರಡು ಅಥವಾ ಮೂರು ಬಾರಿ ನಿರಂತರವಾಗಿ ಠೇವಣಿ ಕಳೆದು ಕೊಂಡರೆ ಮತ್ತೆ ಸ್ಪರ್ಧಿಸುವುದನ್ನು ತಡೆಯುವ ನಿಯಮ ರೂಪಿಸಲಾಗು ವುದು ಎಂದು ಹೆಸರ ಹೇಳಲು ಇಚ್ಛಿಸದ ಕಸಾಪದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸಬರಿಗೂ ಅವಕಾಶಕ್ಕೆ ಕ್ರಮ
ಜಿಲ್ಲಾವಾರು ಕೇಂದ್ರಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ದವರೇ ಮತ್ತೆಮತ್ತೆ ಗೆದ್ದು ಬರುತ್ತಿದ್ದಾರೆ. ಪರಿಷತ್ತಿನಲ್ಲಿ ಹೊಸಬರಿಗೂ ಅವಕಾಶ ಕಲ್ಪಿಸಲು ಪೂರಕವಾಗಿ ಕೆಲವು ಬದಲಾವಣೆ ತರಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಷಿ ಹೇಳಿದ್ದಾರೆ.