ಬೆಂಗಳೂರು: ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಾತನಾಡಿದ ಎಚ್.ನಾಗೇಶ್, ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಸಿಎಂ ಜೊತೆಗೆ ನಾನು ಚರ್ಚೆ ನಡೆಸುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್‍ಗಳಲ್ಲಿ ಸ್ಪೋರ್ಟ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್‍ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.
ಅಬಕಾರಿ ಇಲಾಖೆಗೆ ಲಾಕ್‍ಡೌನ್‍ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ. ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್‍ಡೌನ್‍ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಮನೆ ಮನೆಗೆ ಮಧ್ಯ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ಬೇರೆ ರಾಜ್ಯದ ಅನಿಸಿಕೆ, ಅಭಿಪ್ರಾಯ ಪಡೆದು ಮುಂದಿನ ಕ್ರಮದ ಚಿಂತನೆ ಮಾಡುತ್ತೀವೆ ಎಂದರು.
ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು