ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಐದನೇ ದಿನಕ್ಕೆ ಕಾಲಿರಿಸಿದೆ. ಆದರೆ ಇದರ ವಿರುದ್ಧ ರಾಜ್ಯ ಹೈಕೋರ್ಟ್ ಗರಂ ಆಗಿದ್ದು, ಕೊರೊನಾ ಇರೋವಾಗ ಏನಿದೆಲ್ಲಾ ಹುಡುಗಾಟ ಎಂಬ ಧಾಟಿಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದೆ. ಕೋರ್ಟ್ ನೋಟಿಸ್ ಕೈಯಲ್ಲಿ ಹಿಡಿದು, ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯ ಸರ್ಕಾರ ಸೆಟೆದು ನಿಂತಿದೆ. ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ಫೀಲ್ಡ್ಗಿಳಿಸಿದೆ. ಇಂದು ಐದನೇ ದಿನಕ್ಕೇ ಕಾಂಗ್ರೆಸ್ ಪಾದಯಾತ್ರೆ ಮೊಟಕುಗೊಳಿಸಲು ಅದಾಗಲೇ ಕಾಂಗ್ರೆಸ್ ನಾಯಕರ ವಿರುದ್ದ 4ನೆಯ ಎಫ್ಐಆರ್ ದಾಖಲಿಸಿದೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ 30 ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.
ಹೈಕೋರ್ಟ್ ತರಾಟೆ, ಪಾದಯಾತ್ರೆಗೆ ಸರ್ಕಾರ ನಿರ್ಬಂಧ ಹಿನ್ನೆಲೆ ಕಾಂಗ್ರೆಸ್ ಪಾದಯಾತ್ರೆಯನ್ನ ತಡೆಯಲು ಮುಂದಾಗಿರುವ ಪೊಲೀಸರು ಭಾರೀ ಪ್ಲಾನ್ ರೂಪಿಸಿದ್ದಾರೆ. ನಿನ್ನೆ ರಾಮನಗರದಲ್ಲಿ ತಡರಾತ್ರಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿದೆ. ರಾಮನಗರ ಜಿಲ್ಲೆಯ ಗಡಿಭಾಗದಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ, ಪಾದಯಾತ್ರೆಗೆ ಹೊರ ಜಿಲ್ಲೆಗಳಿಂದ ಪಾದಯಾತ್ರೆಗೆ ಬರುವವರಿಗೆ ಬ್ರೇಕ್ ಹಾಕಲು ಸಜ್ಜಾಗಿ ನಿಂತಿದ್ದಾರೆ. ಇಡೀ ರಾಮನಗರ ಪೊಲೀಸ್ ಭದ್ರಕೋಟೆಯಾಗಿ ಪರಿಣಮಿಸಿದೆ. ಪಾದಯಾತ್ರೆ ನಡೆಸಿದ್ರೆ ಸಾಲುಸಾಲು ಕೈ ನಾಯಕರ ಬಂಧನ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ಎಲ್ಲ ರೀತಿಯ ಪ್ಲಾನ್ ಮಾಡಿಕೊಂಡಿದ್ದು, ರಾಮನಗರ ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ.
Laxmi News 24×7