ನವದೆಹಲಿ: ಮಹಾರಾಷ್ಟ್ರ ಸರ್ಕಾರಕ್ಕೆ ಕೊರೊನಾ ಸಂಕಷ್ಟ ಎದುರಾಗಿದ್ದು, ರಾಜ್ಯದ 10 ಸಚಿವರಿಗೆ ಹಾಗೂ 20 ಶಾಸಕರಿಗೆ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವರ್ ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಮುಂದೆ ನಿಂತು ಎದುರಿಸಬೇಕಿದ್ದ ಸಚಿವರಿಗೆ ಹಾಗೂ ಶಾಸಕರಿಗೆ ಕೊರೊನಾ ಸೋಂಕು ತಗುಲಿರೋದು ಆತಂಕಕ್ಕೆ ಕಾರಣವಾಗಿದೆ.
ನಿನ್ನೆ ರಾಜ್ಯದಲ್ಲಿ 8,067 ಕೊರೊನಾ ಕೇಸ್ ದಾಖಲಾಗಿದೆ. ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನವನ್ನ ಮೊಟಕುಗೊಳಿಸಿದ್ದೇವೆ. ಎಲ್ಲರೂ ಕೂಡ ಹೊಸ ವರ್ಷ ಹಾಗೂ ಬರ್ತಡೇಗಳನ್ನ ಇನ್ನೊಂದು ದಿನ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವೇಗವಾಗಿ ಒಮಿಕ್ರಾನ್ ಸೋಂಕು ಹರಡುತ್ತಿದೆ. ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಕಟ್ಟುನಿಟ್ಟಿನ ಕ್ರಮವನ್ನ ಜರುಗಿಸಲಾಗುವುದು. ಎಲ್ಲರೂ ಕೂಡ ಕೊರೊನಾ ನಿಯಮಗಳನ್ನ ಚಾಚೂ ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂದ್ಹಾಗೆ ಮಹಾರಾಷ್ಟ್ರದಲ್ಲಿ ಕಳೆದ 12 ದಿನಗಳ ಅಂತರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆ ಕಾಣ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನೈಟ್ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೇ ಸಭೆ-ಸಮಾರಾಂಭಗಳಿಗೆ ಶೇಕಡಾ 50 ರಷ್ಟು ಅಕ್ಯುಪೆನ್ಸಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮುಂಬೈನಲ್ಲಿ ನಿನ್ನೆ 5,631 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಮೊನ್ನೆ 2,000ಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಕಳೆದ ವರ್ಷ ಬರೋಬ್ಬರಿ 7,85,110 ಮಂದಿಯನ್ನ ಕೊರೊನಾ ಸೋಂಕು ಬಾಧಿಸಿದೆ. ಪುಣೆಯಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 5.9ರಷ್ಟಿದೆ. ನಿನ್ನೆ ಅಲ್ಲಿ 412 ಮಂದಿಗೆ ಸೋಂಕು ದೃಢಪಟ್ಟಿದೆ.