ಬೆಳಗಾವಿ ನಗರದ ಕೊಂಡುಸ್ಕರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬೆಂಗಳೂರು ನಗರ ಪಡಿತರ ವಿತರಕರ ಹಿತರಕ್ಷಣಾ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಬೃಹತ್ ಸಮ್ಮೇಳನ ಸಮಾವೇಶ ಜ.11ರಂದು ಬೆಳಗ್ಗೆ 11ಗಂಟೆಗೆ ನಡೆಯಲಿದೆ ಎಂದು ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಜೆ.ಬಿ.
ಕುಮಾರ್ ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆಯು 80 ಕೋಟಿಗೂ ಹೆಚ್ಚು ಜನರ ಸಂಪರ್ಕ ವ್ಯವಸ್ಥೆ ಆಗಿರುತ್ತದೆ. ಕೇಂದ್ರ ಸರ್ಕಾರ ಕೇರಳ ಸರ್ಕಾರದ ರೀತಿಯಲ್ಲಿ ಉತ್ತಮ ಪೌಷ್ಟಿಕ ಪದಾರ್ಥಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನೀಡಲು ಕ್ರಮವಹಿಸಬೇಕು ಹಾಗೂ ಉಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಕಾರ್ಯಕ್ರಮವನ್ನು ರೂಪಿಸುವುದು ಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಇದರ ಜೊತೆಯಲ್ಲಿ ರಾಷ್ಟ್ರದ ನಮ್ಮ ಎಲ್ಲಾ ವಿತರಕರ ಬಂಧುಗಳಿಗೂ ನಿಗದಿತ ಸಮಯದಲ್ಲಿ ಕಮಿಷನ್ ಹಣವನ್ನು ನೀಡುವುದರ ಮೂಲಕ ಅವರ ಬದುಕಿಗೆ ನೆರವಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಸಮ್ಮೇಳನದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಲಿದ್ದು, ಉದ್ಘಾಟಕರಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ್ ಕತ್ತಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ನಗರ ಮತ್ತು ಉಳಿದ ಕರ್ನಾಟಕ ರಾಜ್ಯದ ನಗರಪಾಲಿಕೆ ಮತ್ತು ಪುರಸಭೆ ಪಡಿತರ ಸಾಗಾಣಿಕೆ ವೆಚ್ಚವನ್ನು ಪ್ರತಿ ಕಿ.ಮೀ ಗೆ 6 ರೂ ನಂತೆ ಹತ್ತು ಕಿಲೋಮೀಟರ್ ವರೆಗೂ ನಿಗದಿಪಡಿಸುವುದು, ಪಡಿತರ ಕಾರ್ಡುದಾರರಿಗೆ 5 ಲೀಟರ್ ಸೀಮೆಎಣ್ಣೆ ಬದಲು 5 ಕೆ.ಜಿ ಎಲ್ಪಿಜಿ ಗ್ಯಾಸ್ ನೀಡುವುದು, ಪ್ರತಿ ಕ್ವಿಂಟಾಲ್ ಗೆ ಈಗ ನೀಡುತ್ತಿರುವ 100 ರೂ ಬದಲಾಗಿ 300 ರೂಗಳಿಗೆ ಹೆಚ್ಚಿಸುವುದು ಸೇರಿದಂತೆ ಗ್ರಾಹಕರಿಗೂ ಮತ್ತು ವಿತರಕರಿಗೂ ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಮಾನ್ಯ ಸಚಿವರಿಗೆ ಕೊಡಲಾಗುವುದು, ಇದರ ಜೊತೆಗೆ ಸಮಾವೇಶದಲ್ಲಿ ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೈದ್ಯಕೀಯ, ಪತ್ರಿಕಾರಂಗ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರಿಗೆ ಕುವೆಂಪು ಕನ್ನಡ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಕಾರ್ಯಕ್ರಮದ ವಿವರವನ್ನು ನೀಡಿದರು.