ಚುನಾವಣೆಯಲ್ಲಿ ಗೆದ್ದವರು ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನುವುದು ಸಹಜ. ಸೋತವರು, ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆ ಇದಾಗಿರುವುದರಿಂದ ಈ ಫಲಿತಾಂಶಕ್ಕೂ, ಮುಂದಿನ ಅಸೆಂಬ್ಲಿ ಚುನಾವಣೆಗೆ ಸಂಬಂಧವಿಲ್ಲ ಎನ್ನುವುದೂ ಸಹಜ.
ಆದರೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಬಿಜೆಪಿಗೆ ಆಗಿರುವ ಹಿನ್ನಡೆಯನ್ನು ಒಪ್ಪಿಕೊಂಡಿದ್ದಾರೆ.
ವಿವಾದಕಾರಿ ಹೇಳಿಕೆಗೆ ಹೆಸರಾಗಿರುವ ಇವರು ಸುಧಾರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದಿಂದ ಬೀಗುತ್ತಿದ್ದ ಕಾಂಗ್ರೆಸ್ಸಿಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇನ್ನಷ್ಟು ಬೀಗುವಂತೆ ಮಾಡಿರುವುದಂತೂ ಹೌದು. ಕಾಂಗ್ರೆಸ್ಸಿನ ಎನ್ನುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆಗೆ ಈ ಫಲಿತಾಂಶ ಇನ್ನಷ್ಟು ಶಕ್ತಿಯನ್ನಂತೂ ತುಂಬಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ವಂತ ನೆಲದಲ್ಲಿ ಬಿಜೆಪಿ ಸೋಲುವ ಮೂಲಕ, ಪಕ್ಷ ತೀವ್ರ ಮುಜುಗರನ್ನು ಎದುರಿಸುವಂತಾಗಿದೆ. ಫಲಿತಾಂಶದ ಬಗ್ಗೆ ಈಶ್ವರಪ್ಪ ನೀಡಿದ ವ್ಯಂಗ್ಯ ಹೇಳಿಕೆ ಹೀಗಿದೆ:
ಪ್ರಿಯಾಂಕ ಗಾಂಧಿ ವಾಧ್ರಾ ಕೂಡ ‘ಫಂಟಾಸ್ಟಿಕ್ ಕೆಪಿಸಿಸಿ’ ಎಂದಿದ್ದಾರೆ
ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರ್ಷಭರಿತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾಧ್ರಾ ಕೂಡ ‘ಫಂಟಾಸ್ಟಿಕ್ ಕೆಪಿಸಿಸಿ’ ಎಂದಿದ್ದಾರೆ. ಸೋಲಿನ ಮುಖವನ್ನೇ ನೋಡುತ್ತಿದ್ದ ಕಾಂಗ್ರೆಸ್ಸಿಗೆ ಈ ಫಲಿತಾಂಶ ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿದೆ ಎಂದು ಇವರಿಬ್ಬರ ಪ್ರತಿಕ್ರಿಯೆಗೆ ಬಿಜೆಪಿ ಪಡಶಾಲೆಯಲ್ಲಿ ವ್ಯಂಗ್ಯವಾಡಲಾಗುತ್ತಿದೆ.
ಸಿಇಒ ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮೀಟಿಂಗ್ ನಡೆಸಿ ಈಗತಾನೇ ಹೊರಬರುತ್ತಿದ್ದೇನೆ
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಚಿವ ಈಶ್ವರಪ್ಪ, “ಸಿಇಒ ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮೀಟಿಂಗ್ ನಡೆಸಿ ಈಗತಾನೇ ಹೊರಬರುತ್ತಿದ್ದೇನೆ, ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ನಿಮ್ಮ ಬಾಯಿಯಿಂದಲೇ ನಾನು ಮೊದಲು ಕೇಳುತ್ತಿರುವುದು. ಎಲ್ಲೆಲ್ಲಿ ಗೆದ್ದಿದ್ದೇವೆ ಅಲ್ಲೆಲ್ಲಾ ಇನ್ನಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇವೆ, ಎಲ್ಲೆಲ್ಲಿ ನಮಗೆ ಮೆಜಾರಿಟಿ ಬಂದಿಲ್ಲವೋ ಅಲ್ಲೆಲ್ಲಾ, ನಮ್ಮ ಸಂಘಟನೆಯನ್ನು ಬಲ ಪಡಿಸುವ ಕೆಲಸವನ್ನು ಮಾಡುತ್ತೇವೆ”ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಪಥನ ಆರಂಭವಾಗುತ್ತಿದೆ ಎಂದು ಸಿದ್ದರಾಮಯ್ಯನವರು ಹೇಳುತಿದ್ದಾರೆ ಈ ಬಗ್ಗೆ
ಕಾಂಗ್ರೆಸ್ ಪರವಾದ ಅಲೆಯಿದೆ, ಬಿಜೆಪಿ ಪಥನ ಆರಂಭವಾಗುತ್ತಿದೆ ಎಂದು ಸಿದ್ದರಾಮಯ್ಯನವರು ಹೇಳುತಿದ್ದಾರೆ ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, “ಮದುವೆಯಾಗಿ 25ವರ್ಷದ ನಂತರ ಗಂಡು ಮಗುವಾದರೆ ಎಂತಹ ಸಂತೋಷ ಬರುತ್ತೋ, ಅಂತಹ ಖುಷಿ ಕಾಂಗ್ರೆಸ್ಸಿಗೆ ಬಂದಿದೆ. ಸೋತು.. ಸೋತು ಹೈರಾಣವಾಗಿದ್ದ ಕಾಂಗ್ರೆಸ್ಸಿಗೆ ಈಗ ಗಂಡು ಮಗುವಾಗಿದೆ. ಈ ಸಂತೋಷದ ಸಮಯದಲ್ಲಿ ಆಕಡೆ ಮನೆ ಈಕಡೆ ಮನೆಯವರಿಗೆ ಬೈಯುವುದಕ್ಕೆ ಹೋಗಬಾರದು”ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
’25ವರ್ಷಗಳ ನಂತರ ಕಾಂಗ್ರೆಸ್ಸಿಗೆ ಗಂಡು ಮಗುವಾಗಿದೆ’
ಗಂಡು ಮಗು ಹುಟ್ಟಿದ ನಾಮಕರಣಕ್ಕೆ ನೀವೂ ಭಾಗಿಯಾಗುತ್ತೀರಾ ಎನ್ನುವ ಪ್ರಶ್ನೆಗೆ, “ಖಂಡಿತ ಒಳ್ಳೆಯ ಹೆಸರನ್ನು ಇಟ್ಟರೆ ಭಾಗಿಯಾಗುತ್ತೇನೆ, ಒಳ್ಳೆಯ ಕೆಲಸವನ್ನು ಅವರು ಮಾಡಲಿ ಎಂದು ಅವರಿಗೆ ಶುಭವನ್ನು ಕೋರುತ್ತೇನೆ. ಎಲ್ಲೆಲ್ಲಿ ನಾವು ಗೆದ್ದಿದ್ದೇವೋ ಅಲ್ಲೆಲ್ಲಾ ಇನ್ನಷ್ಟು ಅಭಿವೃದ್ದಿ ಕೆಲಸವನ್ನು ಮಾಡುತ್ತೇವೆ”ಎಂದು ಈಶ್ವರಪ್ಪ ಹೇಳಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಮುಖ್ಯಮಂತ್ರಿಗಳು ಬಂದಿದ್ದರಿಂದ ಈಶ್ವರಪ್ಪ, ಮಾಧ್ಯಮದವರ ಮುಂದಿನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ