ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಸಭೆ ಸೇರಿರುವ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ನೇ ತಾರೀಖು ಕರ್ನಾಟಕ ಬಂದ್ ಗೆ (Karnataka Bandh) ಕರೆ ಕೊಟ್ಟಿವೆ. ಒಂದು ವೇಳೆ ಡಿಸೆಂಬರ್ 31ರ ಒಳಗೆ ಎಂಇಎಸ್ನ್ನು ನಿಷೇಧಿಸಿದರೆ ಬಂದ್ ನಡೆಸುವುದಿಲ್ಲ, ಇಲ್ಲದಿದ್ದರೆ ಖಂಡಿತವಾಗಿಯೂ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ತಮ್ಮ ಹೋರಾಟದ ಕುರಿತು ವಿವರವಾಗಿ ಮಾತನಾಡಿದ ವಾಟಾಳ್ ನಾಗರಾಜ್ ಮಾಧ್ಯಮದವ್ರನ್ನ ಸುವರ್ಣ ಸೌಧದಿಂದ ಹೊರಗಡೆ ಹಾಕಿದ್ದಾರೆ.. ಈ ರೀತಿ ಘಟನೆ ಯಾವತ್ತೂ ನಡೆದಿರಲಿಲ್ಲ..ಪ್ರಜಾಪ್ರಭುತ್ವದಲ್ಲಿ ಇದು ಅಗೌರವ, ಸ್ಪೀಕರ್ ತೀರ್ಮಾನಕ್ಕೆ ನಮ್ಮ ದಿಕ್ಕಾರ ಎಂದರು.
ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದ್ಯಾ?
ಮುಂದುವರೆಸಿ ಕರ್ನಾಟಕದಲ್ಲಿ ಸರ್ಕಾರ ಇದ್ಯಾ ಇಲ್ವಾ…ಪೊಲೀಸ್ ವ್ಯವಸ್ಥೆ ಇದ್ಯಾ..ಒಂದೇ ಸಮನೆ ಕರ್ನಾಟಕದಲ್ಲಿ ಗೂಂಡಾಗಿರಿ, ದಬ್ಬಾಳಿಕೆ ನಡೆಯುತ್ತಿದೆ. ಮಹಾರಾಷ್ಟ್ರ ಏಕೀಕರಣ ಸಮೀತಿ ಕರ್ನಾಟಕದಲ್ಲಿ ಇರೋದಕ್ಕೆ ಯೋಗ್ಯವಲ್ಲ, ಬೆಳಗಾವಿಯ ರಾಜಕಾರಣಿಗಳು ಮರಾಠಿ ಏಜೆಂಟ್ ಗಳಾಗಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಪತಿ ಬಳಿ ಮನವಿ ಮಾಡಲು ನಿರ್ಧಾರ
ಕನ್ನಡ ಪರ ಹೋರಾಟಗಾರರು ಧೈರ್ಯದಿಂದ ಹೋರಾಡ್ತಿದ್ದಾರೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದ ವಿಚಾರಕ್ಕೆ ಅವ್ರನ್ನ ಕೊಲೆಗಡುಕರ ಥರ ನೋಡ್ತಿದ್ದಾರೆ. ಅವ್ರನ್ನ ಮತ್ತೆ ಕಸ್ಟಡಿಗೆ ಪಡೆದಿದ್ದಾರೆ. ಉದ್ದವ್ ಠಾಕ್ರೆ ಸರ್ಕಾರವನ್ನ ಕೂಡಲೇ ವಜಾ ಮಾಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡ್ತೀನಿ, ಸಿಎಂ ಗೆ ಎಮ್ ಇ ಎಸ್ ನಿಷೇಧ ಮಾಡ್ಬೇಕು ಅಂತ ಒತ್ತಾಯ ಮಾಡ್ತೀನಿ ಎಂದರು.
ಸಿಎಂ ಬಗ್ಗೆ ಗೌರವವಿದೆ..ತೀರ್ಮಾನ ತೆಗೆದುಕೊಳ್ಳಿ…ನಿಮ್ಮನ್ನ ತೆಗೆದುಹಾಕಲು ಕಾಯ್ತಿದ್ಧಾರೆ. ಏನಾಗಿದೆ ಪೊಲೀಸ್ ವ್ಯವಸ್ಥೆಗೆ. ಕನ್ನಡ ಬಾವುಟಕ್ಕೆ ಬೆಂಕಿ ಇಡ್ತಿದ್ದಾರೆ, ನಾವು ಇದನ್ನು ಸಹಿಸಲ್ಲ. ಉದ್ದವ್ ಠಾಕ್ರೆ ಬಾಲ ಬಿಚ್ಚುವಂತಿಲ್ಲ..ನಮ್ಮ ಮೇಲೆ ಹಲ್ಲೆ ದಿನನಿತ್ಯವೂ ನಡೀತಿದೆ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ 31ರಂದು ಬಂದ್ ಫಿಕ್ಸ್
ಡಿಸೆಂಬರ್ 31ನೇ ತಾರೀಖು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರಗೆ ಕರ್ನಾಟಕ ಬಂದ್ ಆಚರಿಸಲು ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಎಲ್ಲರೂ ಬೆಂಗಳೂರಿನ ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಇದು ಪಕ್ಷಾತೀತವಾದ ಹೋರಾಟವಾಗಲಿ ಎಂದು ವಾಟಾಳ್ ಕರೆ ನೀಡಿದರು.
ಎಲ್ಲರೂ ಸ್ವಯಂಪ್ರೇರಿತರಾಗಿ ಬನ್ನಿ
ಈ ಬಂದ್ ಗೆ ಯಾರನ್ನೂ ಬರುವಂತೆ ನಾವು ಕರೆಯುವುದಿಲ್ಲ, ಜನ ತಾವಾಗೇ ಸ್ವಯಂಪ್ರೇರಿತವಾಗಿ ಬರಬೇಕು. ಯಾರನ್ನೂ ಬರುವಂತೆ ಬಲವಂತ ಕೂಡಾ ಮಾಡುವುದಿಲ್ಲ. ಇದು ನಮ್ಮ ನೆಲದ, ಅಭಿಮಾನದ ಹೋರಾಟ. ನಮ್ಮ ಬಾವುಟ, ನಮ್ಮ ಭಾಷೆ ನಮಗೆ ತಾಯಿ ಸಮಾನ. ಇದಕ್ಕಾಗಿ ನಾವು ಹೋರಾಟ ಮಾಡಬೇಕಾದಂಥಾ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ. ಆದರೆ ಯಾವುದೇ ಕಾರಣಕ್ಕೂ ಎಂಇಎಸ್ ಪುಂಡಾಟಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.
ಇನ್ನು ಈ ಸಭೆಯಲ್ಲಿ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿದಂತೆ ಅನೇಕ ಕನ್ನಡಪರ ಸಂಘಟನೆ ಮುಖಂಡರು ಭಾಗಿಯಾಗಿದ್ದರು. ವಿವಿಧ ಸಂಘಟನೆಗಳು ಜೊತೆ ಸೇರಿ ಈ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ವಾಟಾಳ್ ತಿಳಿಸಿದರು. ಅಷ್ಟರಲ್ಲಿ ಎಂಇಎಸ್ ನ್ನು ನಿಷೇಧಿಸಿದರೆ ತಾವು ಬಂದ್ ಆಲೋಚನೆ ಕೈಬಿಡುವುದಾಗಿ ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ತಿಳಿಸಿದರು.
Laxmi News 24×7